ಬೆಂಗಳೂರು: ಕೇವಲ ಸಿಗರೇಟಿಗಾಗಿ ಎರಡು ಭೀಕರ ಕೊಲೆಯಾಗಿರುವ ಘಟನೆ ಕೆ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಗೋವಿಂದಪುರ ಮುಖ್ಯ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಅಮೀನ್(30) ಮತ್ತು ಮತೀನ್(32) ಮೃತ ಸಹೋದರರು. ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಅಮೀನ್ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಂಡಿದ್ದ. ಆದರೆ, ಹಣ ಕೊಡದೆ ವಾಪಸ್ಸು ಬರುತ್ತಿದ್ದರಿಂದ ಅಂಗಡಿ ಮಾಲೀಕ ಹಣ ಕೊಡುವಂತೆ ಕೇಳಿದ್ದ. ಈ ವೇಳೆ ಅಮೀನ್ ನನ್ನನ್ನೇ ಹಣ ಕೇಳ್ತೀಯಾ ಅಂತ ಅಂಗಡಿ ಮಾಲೀಕನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾನೆ. ಕೂಡಲೇ ಅಂಗಡಿ ಮಾಲೀಕ ತನ್ನ ಸ್ನೇಹಿತರಿಗೆ ಕರೆ ಮಾಡಿ ನಡೆದ ವಿಚಾರವನ್ನು ಹೇಳಿದ್ದಾನೆ.
ವಿಷಯ ತಿಳಿದಿದ್ದೇ ಮರದ ದೊಣ್ಣೆಯನ್ನು ಹಿಡಿದು ಬಂದ ಅಂಗಡಿ ಮಾಲೀಕನ ಸ್ನೇಹಿತರು ಗೋವಿಂದಪುರದ ಬಿಬಿಎಂಪಿ ಮೈದಾನದ ಬಳಿ ಗಲಾಟೆ ಮಾಡಿದ್ದಾರೆ. ಈ ವೇಳೆ ಅಮೀನ್ ಹಾಗೂ ಆತನ ಸಹೋದರ ಮತೀನ್ಗೆ ದೊಣ್ಣೆ ಹಾಗೂ ಕಲ್ಲುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮತೀನ್ ಸ್ಥಳದಲ್ಲೇ ಮೃತಪಟ್ಟರೆ, ಅಮೀನ್ ನಿಮಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಪ್ರಕರಣ ಸಂಬಂಧ ಕೆ.ಜಿ ಹಳ್ಳಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Comments are closed.