ಕರಾವಳಿ

ಹುಸೈನಬ್ಬ ಸಾವು ಪ್ರಕರಣಕ್ಕೆ ಟ್ವಿಸ್ಟ್: ತಲೆಗೆ ಬಿದ್ದ ಏಟಿನಿಂದ ಸಾವು

Pinterest LinkedIn Tumblr

ಉಡುಪಿ: ಅಕ್ರಮವಾಗಿ ದನ‌ ಸಾಗಾಟ ಮಾಡುತ್ತಿದ್ದ ಜೋಕಟ್ಟೆಯ ಹುಸೈನಬ್ಬ ಅವರ ತಲೆಗೆ ಬಿದ್ದ ಗಂಭೀರ ಏಟಿನಿಂದಾಗಿ ಅವರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದ್ದು ಹುಸೈನಬ್ಬ ಅಸಹಜ ಸಾವು ಸದ್ಯ ಕೊಲೆ‌ ಎಂಬುದು ಮರಣೋತ್ತರ ಪರೀಕ್ಷೆ ಮೂಲಕ ಸಾಬೀತಾಗಿದೆ.

ಜೂನ್ 13ರಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತನಿಖಾಧಿಕಾರಿಗಳಿಗೆ ಮರಣೋತ್ತರ ಪರೀಕ್ಷಾ ವರದಿ‌ ಸಲ್ಲಿಸುವಂತೆ ನೋಟಿಸ್ ‌ನೀಡಿದ್ದರ ಹಿನ್ನೆಲೆಯಲ್ಲಿ‌ ತನಿಖಾಧಿಕಾರಿ ಕಾರ್ಕಳ ಎಎಸ್ಪಿ ಹೃಷಿಕೇಶ್ ಸೋನಾವಣೆ ಮಣಿಪಾಲ ಆಸ್ಪತ್ರೆ ವೈದ್ಯರು ನೀಡಿರುವ ಮರಣೋತ್ತರ ಪರೀಕ್ಷಾ ವರದಿಯನ್ನು ಸರ್ಕಾರಿ‌ ಅಭಿಯೋಜಕಿ‌‌ ಶಾಂತಿ‌ ಬಾಯಿ ಅವರ ಮೂಲಕ ನ್ಯಾಯಾಧೀಶ ವೆಂಕಟೇಶ್ ನಾಯ್ಕ‌ ಅವರಿಗೆ ಸಲ್ಲಿಸಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಹುಸೈನಬ್ಬ ಅವರ ತಲೆಗೆ ಬಲವಾದ ಏಟು‌ ಬಿದ್ದು ಗಾಯವಾಗಿರುವುದು ಪತ್ತೆಯಾಗಿದೆ.‌ ಮೃತರ ರಕ್ತದ ಗುಂಪು‌‌ ಸೇರಿದಂತೆ ಇತರೆ ಪರೀಕ್ಷಾ ವರದಿ‌ಯನ್ನು ಇನ್ನೆರಡು‌‌ ತಿಂಗಳಲ್ಲಿ‌ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಲಿದೆ.

ಮೇ 29ರ ತಡರಾತ್ರಿ ಹಿರಿಯಡ್ಕ‌ ಹಾಗೂ ಪೆರ್ಡೂರು ಗ್ರಾಮದ ಮಧ್ಯೆ ಅಕ್ರಮ ದನ ಸಾಗಾಟ ಮಾಡುವಾಗ ಹುಸೈನಬ್ಬ (62)ಹಾಗೂ ಇನ್ನಿಬ್ಬರು‌‌ ಭಜರಂಗದಳ‌ ಕಾರ್ಯಕರ್ತರು ಹಿರಿಯಡ್ಕ ಪೊಲೀಸರೊಂದಿಗೆ ದನ ಸಾಗಾಟ ತಡೆ‌ ಕಾರ್ಯಾಚರಣೆಯಲ್ಲಿರುವಾಗ ಪೆರ್ಡೂರು ಶೇನರಬೆಟ್ಟು ಎಂಬಲ್ಲಿ ಸಿಕ್ಕಿಬಿದ್ದಿದ್ದರು. ಈ ವೇಳೆ ಹುಸೈನಬ್ಬರ ಮೇಲೆ ಸ್ಥಳದಲ್ಲೇ ಹಲ್ಲೆ ನಡೆಸಿ ಪೊಲೀಸ್ ಜೀಪಿನಲ್ಲೇ ಠಾಣೆಗೆ ಕರೆತರಲಾಗಿತ್ತು ಆದರೆ ಠಾಣೆಗೆ ಬರುವಷ್ಟರಲ್ಲಿ‌ ಪೊಲೀಸ್ ವಾಹನದಲ್ಲೇ‌‌ ಹುಸೈನಬ್ಬ ಸಾವನಪ್ಪಿದ್ದರು. ಹಿಂದೆ‌ ಸಿಕ್ಕಿರುವ ದನದೊಂದಿಗೆ ಬಂದ ಭಜರಂಗದಳ‌ ಕಾರ್ಯಕರ್ತ‌‌ ಸೂರಿಯೊಂದಿಗೆ ಪೊಲೀಸರು ಮೃತದೇಹವನ್ನು ಹಿರಿಯಡ್ಕ ಸಮೀಪ‌ ಇರುವ ಕಾಡಿನಲ್ಲಿ‌ ಎಸೆದು ಬಂದು‌ ಅನುಮಾನಾಸ್ಪದ‌ ಸಾವು ಎಂದು ಪ್ರಕರಣ ದಾಖಲಿಸಿದ್ದರು.

ಆರೋಪಿಗಳಾದ‌ ಹಿರಿಯಡ್ಕ ಠಾಣೆ ಎಸ್ಐ ಡಿಎನ್ ಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಮೋಹನ್ ಕೊತ್ವಾಲ್, ಗೋಪಾಲ್ ಮತ್ತು ಭಜರಂಗದಳದ ಕಾರ್ಯಕರ್ತರಾದ ಸೂರಿ ಯಾನೆ‌‌‌ ಸುರೇಶ್ ಮೆಂಡನ್, ಪ್ರಸಾದ್, ಉಮೇಶ್, ರತನ್,ಚೇತನ್ ಆಚಾರ್ಯ, ಶೈಲೇಶ್ ಶೆಟ್ಟಿ, ಗಣೇಶ್ ನಾಯ್ಕ ಹಾಗೂ ಗೋ ಸಾಗಾಟ ಮಾಡಿದ್ದ ಜೋಕಟ್ಟೆಯ ಜನರನ್ನು ಬಂಧಿಸಲಾಗಿತ್ತು.

ಸದ್ಯ ಪ್ರಕರಣ ಸಿಐಡಿಗೆ ನೀಡಲಾಗಿದೆ.

Comments are closed.