ಕರ್ನಾಟಕ

ಡ್ಯಾಂಗಳಿಗೆ ನೀರೋ ನೀರು; ಮಳೆ ಋತುವಿನ ಆರಂಭದಲ್ಲೇ ಭರ್ತಿ ಹರ್ಷ

Pinterest LinkedIn Tumblr

ಮಂಡ್ಯ/ ಕೊಪ್ಪಳ/ಹಾಸನ: ರಾಜ್ಯಾದ್ಯಂತ ಮೇ ಅಂತ್ಯ ಹಾಗೂ ಜೂನ್‌ ಆರಂಭದಲ್ಲೇ ಭರ್ಜರಿ ಮಳೆಯಾದ ಕಾರಣ ಜೀವನದಿಗಳು ಮೈದುಂಬಿಕೊಂಡಿವೆ. ಜತೆಗೆ ಅಣೆಕಟ್ಟೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರತೊಡಗಿದೆ.

ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕಾವೇರಿ ಉಕ್ಕಿ ಹರಿಯುತ್ತಿದ್ದು, ಮಂಡ್ಯದಲ್ಲಿರುವ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಶನಿವಾರ ರಾತ್ರಿ ವೇಳೆಗೆ ನೂರು ಅಡಿ ತಲುಪಿದೆ. ಕಳೆದ ವರ್ಷ ಕೆಆರ್‌ಎಸ್‌ ಅಣೆಕಟ್ಟೆ 100 ಅಡಿ ತುಂಬುವಾಗ ಸೆಪ್ಟೆಂಬರ್‌ 3 ಆಗಿತ್ತು. ಅಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ಈ ಜಲಾಶಯ ಭರ್ತಿಯಾಗಿರಲೇ ಇಲ್ಲ. ಈ ಬಾರಿ ಉತ್ತಮ ವರ್ಷಧಾರೆಯಿಂದ ತುಂಬುವ ಭರವಸೆ ಮೂಡಿಸಿದೆ.

ಕೆಆರ್‌ಎಸ್‌ ಅಣೆಕಟ್ಟಿಗೆ 28,132 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 451 ಕ್ಯುಸೆಕ್‌ ನೀರನ್ನು ಹರಿದುಬಿಡಲಾಗುತ್ತಿದೆ. ಜಲಾಶಯದಲ್ಲಿ 22.79 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.

2 ದಿನಗಳಲ್ಲಿ 9 ಟಿಎಂಸಿ ನೀರು
ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಕೇವಲ ಎರಡು ದಿನದಲ್ಲಿ ಬರೊಬ್ಬರಿ 9 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಬಳ್ಳಾರಿಯ ಹೊಸಪೇಟೆಯಲ್ಲಿರುವ ಈ ಜಲಾಶಯಕ್ಕೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ನೀರಿನ ಮಟ್ಟ 2 ದಿನಗಳಲ್ಲಿ 11 ಅಡಿಗಳಷ್ಟು ಹೆಚ್ಚಿ 1,597 ಅಡಿಗೆ ತಲುಪಿದೆ. ಶನಿವಾರದಂದು 52,136 ಕ್ಯೂಸೆಕ್‌ನಷ್ಟು ಒಳ ಹರಿವಿತ್ತು. ಜಲಾಶಯದಲ್ಲಿ 16.38 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಗುರುವಾರ ಜಲಾಶಯದಲ್ಲಿ 7.75 ಟಿಎಂಸಿ ನೀರಿನ ಸಂಗ್ರಹವಿತ್ತು.

ಹೇಮಾವತಿ ಒಡಲು ಶೇ.50 ಭರ್ತಿ
ಮಲೆನಾಡು ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹಾಸನದ ಹೇಮಾವತಿಯ ಒಡಲು ಅರ್ಧದಷ್ಟು ಭರ್ತಿಯಾಗಿದೆ. ಹೀಗಾಗಿ, ಅಚ್ಚುಕಟ್ಟು ಪ್ರದೇಶದ 7 ಲಕ್ಷ ಎಕರೆಯಲ್ಲಿನ ಮುಂಗಾರು ಬೆಳೆಗೆ ನೀರು ಸಿಗುವ ಆಶಾಭಾವ ಇದೆ. ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಜೂ.10 ರಿಂದ 15ರವರೆಗೆ ದಾಖಲೆಯ ಒಳ ಹರಿವು ಇದ್ದು, ಜಲಾಶಯ ಸಾಮರ್ಥಯದ ಶೇ.50 ನೀರು ಸಂಗ್ರಹವಾಗಿದೆ. ಗರಿಷ್ಠ 37.10 ಟಿಎಂಸಿ ಸಂಗ್ರಹದ ಜಲಾಶಯದಲ್ಲಿ ಶನಿವಾರ 18.50 ಟಿಎಂಸಿ ನೀರಿತ್ತು.

Comments are closed.