ಕರ್ನಾಟಕ

ಬೆಂಗಳೂರಿನಲ್ಲಿ 2020ರೊಳಗೆ ಅಂತರ್ಜಲ ಖಾಲಿ: ನೀತಿ ಆಯೋಗ ಎಚ್ಚರಿಕೆ

Pinterest LinkedIn Tumblr


ಬೆಂಗಳೂರು: 2020ರೊಳಗೆ ಬೆಂಗಳೂರಿನಲ್ಲಿ ಅಂತರ್ಜಲ ಖಾಲಿಯಾಗಲಿದೆ ಎಂದು ನೀತಿ ಆಯೋಗದ ವರದಿಯೊಂದು ಎಚ್ಚರಿಸಿದೆ. ಸಂಯೋಜಿತ ನೀರಿನ ನಿರ್ವಹಣೆ ಸೂಚ್ಯಂಕದಡಿ ಕರ್ನಾಟಕವನ್ನು ದೇಶದ ಪ್ರಮುಖ 5 ರಾಜ್ಯಗಳ ಪಟ್ಟಿಯಲ್ಲಿ ಸೇರಿಸಿದ್ದರೂ ಸಹ ಬೆಂಗಳೂರಿನಲ್ಲಿ ಮಾತ್ರ ಅಂತರ್ಜಲ ಖಾಲಿಯಾಗಲಿದೆ ಎಂದು ನೀತಿ ಆಯೋಗ ಎಚ್ಚರಿಸಿದೆ.

ಅಂತರ್ಜಲ ಸಂಪನ್ಮೂಲಗಳ ವೃದ್ಧಿಯಲ್ಲಿ ಬಹುತೇಕ ರಾಜ್ಯಗಳು ಶೇಕಡ 50ಕ್ಕಿಂತ ಕಡಿಮೆ ಅಂಕಗಳನ್ನು ಪಡೆದುಕೊಂಡಿವೆ. ಜತೆಗೆ, ದೇಶದ ಶೇಕಡ 54 ರಷ್ಟು ಅಂತರ್ಜಲ ಬಾವಿಗಳಲ್ಲಿ ಅಂತರ್ಜಲದ ಕೊರತೆಯಾಗ್ತಿದ್ದು, ದೇಶದ 21 ದೊಡ್ಡ ನಗರಗಳಲ್ಲಿ 2020ರಲ್ಲಿ ಅಂತರ್ಜಲ ಖಾಲಿಯಾಗುವ ಸಾಧ್ಯತೆಯಿದೆ. ಇದರಿಂದ 10 ಕೋಟಿ ಜನತೆಗೆ ತೊಂದರೆಯಾಗಲಿದೆ ಎಂದು ನೀತಿ ಆಯೋಗದ ಸಂಯೋಜಿತ ನೀರಿನ ನಿರ್ವಹಣೆ ಸೂಚ್ಯಂಕ ವರದಿ ನೀಡಿದೆ. ಇನ್ನು, ಅಂತರ್ಜಲದ ಶೋಷಣೆ ಮತ್ತಷ್ಟು ಮುಂದುವರಿದರೆ, ಈ ಮುನ್ಸೂಚನೆ ಶೀಘ್ರದಲ್ಲೇ ನಿಜವಾಗಲಿದೆ. ಬರಗಾಲ ಹಾಗೂ ಪ್ರವಾಹ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದ್ದರೂ ಸಹ ಜನತೆ ಈ ಬಗ್ಗೆ ಯಾಕೆ ಅರ್ಥ ಮಾಡಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾಜಿ ಸದಸ್ಯ ಕಾರ್ಯದರ್ಶಿ ನಜೀಬ್ ಕೆ ಮೊಹಮದ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಕಾಂಕ್ರೀಟ್ ಕಾಡಾಗಿ ಬದಲಾಗಿದೆ. ಇಲ್ಲಿ ಮಳೆಯ ನೀರು ಭೂಮಿಯೊಳಗೆ ಹಿಂಗಿ ಹೋಗುತ್ತಿಲ್ಲ. ಹೀಗಾಗಿ ಅಂತರ್ಜಲ ಭರ್ತಿಯಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ನಾಗರಿಕರಲ್ಲಿ ತಿಳುವಳಿಕೆ ಇದ್ದರೂ, ನೀರನ್ನು ಪುನರ್ ಬಳಕೆ ಮಾಡುವ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಬೆಂಗಳೂರಿನಲ್ಲಿರುವ ಕೆರೆಗಳನ್ನು ಉಳಿಸಿಕೊಳ್ಳಲು, ಮಳೆನೀರು ಕೊಯ್ಲು ವ್ಯವಸ್ಥೆಯ ಮೂಲಕ ಅಂತರ್ಜಲ ಭರ್ತಿ ಮಾಡುವ ಬಗ್ಗೆ ಹಾಗೂ ತ್ಯಾಜ್ಯ ನೀರನ್ನು ಗರಿಷ್ಠ ಸಾಮರ್ಥ್ಯದಲ್ಲಿ ಮರುಬಳಕೆ ಮಾಡಲು ಬೃಹತ್ ಚಳುವಳಿ ನಡೆಯಬೇಕಿದೆ ಎಂದು ನಜೀಬ್ ಕೆ ಮೊಹಮದ್ ಹೇಳಿದ್ದಾರೆ.

ಆದರೆ, ಈ ಬಗ್ಗೆ ಇನ್ನೂ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ ಎಂದು ಹಲವು ತಜ್ಙರು ಅಭಿಪ್ರಾಯಪಟ್ಟಿದ್ದರೂ, ಇಂತಹ ಪರಿಸ್ಥಿತಿ ಮುಂದೆ ಬರದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದ್ದಾರೆ. ಇನ್ನು, ನಾವು ಕೆರೆಗಳನ್ನು ಪುನಶ್ಚೇತನಗೊಳಿಸಬೇಕಿದ್ದು, ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಪುನರ್ ಬಳಕೆ ಮಾಡಬೇಕಿದೆ. ಜತೆಗೆ ನಗರದ ನೀರು ನಿರ್ವಹಣೆಯನ್ನು ನೋಡಿಕೊಳ್ಳಲು ಒಂದು ಪ್ರತ್ಯೇಕವಾದ ಸಂಘಟನೆ ಬೇಕಿದೆ. ಸದ್ಯ ನೀರು ನಿರ್ವಹಣೆ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ಹಲ್ಲು ಕಿತ್ತ ಹಾವಿನಂತಾಗಿದೆ ಎಂದು ಮಳೆ ನೀರು ಕ್ಲಬ್‌ನ ಸ್ಥಾಪಕ ಎಸ್‌.ವಿಶ್ವನಾಥ್ ಹೇಳಿದ್ದಾರೆ.

Comments are closed.