ರಾಷ್ಟ್ರೀಯ

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಗೆ ಕಿರುಕುಳ: ಆರ್‌ಜೆಡಿ ನಾಯಕರ ವಿರುದ್ಧ ಪ್ರಕರಣ

Pinterest LinkedIn Tumblr


ಪಟನಾ: ಬಿಹಾರದ ಗಯಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಆರ್‌ಜೆಡಿ ರಾಷ್ಟ್ರೀಯ ಕಾರ್ಯದರ್ಶಿ ಅಲೋಕ್‌ ಕುಮಾರ್‌ ಮೆಹ್ತಾ ಮತ್ತು ಶಾಸಕ ಸುರೇಂದ್ರ ಯಾದವ್‌ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ನಿನ್ನನ್ನು ಹೇಗೆ ರೇಪ್‌ ಮಾಡಲಾಯಿತು, ಎಲ್ಲೆಲ್ಲಿ ಮುಟ್ಟಿದರು’ ಮುಂತಾಗಿ ಪ್ರಶ್ನೆಗಳ ಸುರಿಮಳೆಗರೆದಿರುವ ಆರ್‌ಜೆಡಿ ನಾಯಕರು, ಆಕೆ ಉತ್ತರಿಸುವಾಗ ತಮ್ಮ ಮೊಬೈಲ್‌ಗಳಲ್ಲಿ ವಿಡಿಯೊ ಮಾಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಐಜಿ ವಿನಯ್‌ ಕುಮಾರ್‌ ತಿಳಿಸಿದ್ದಾರೆ.

ಪೊಲೀಸ್‌ ವಾಹನದಲ್ಲಿ ತೆರಳುತ್ತಿದ್ದ ಸಂತ್ರಸ್ತೆಯನ್ನು ಕೆಳಗಿಳಿಸಿ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೂನ್‌ 14ರಂದು ಶಸ್ತ್ರಸಜ್ಜಿತ ಯುವಕರ ತಂಡವೊಂದು, ಮಹಿಳೆ ಹಾಗೂ ಆಕೆಯ 15 ವರ್ಷದ ಮಗಳ ಮೇಲೆ ಗಂಡನ ಎದುರೇ ಅತ್ಯಾಚಾರವೆಸಗಿತ್ತು. ಗಂಡನನ್ನು ಮರಕ್ಕೆ ಕಟ್ಟಿಹಾಕಿ ದುಷ್ಕೃತ್ಯ ಎಸಗಲಾಗಿತ್ತು.

Comments are closed.