ಕರ್ನಾಟಕ

ಸರಕಾರದ ಅವಧಿ ಬಗ್ಗೆ ಯಾರೂ ಹೇಳಿಕೆ ನೀಡಬಾರದು ಎಂದ ಪರಮೇಶ್ವರ್‌; ಸಿದ್ದರಾಮಯ್ಯಗೆ ಟಾಂಗ್

Pinterest LinkedIn Tumblr


ಬೆಂಗಳೂರು: ಸರಕಾರದ ಅವಧಿ ಬಗ್ಗೆ ಯಾರೂ ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು ಎಂದು ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತ್ಯೇಕ ಬಜೆಟ್ ಹೇಳಿಕೆ ವಿಚಾರದ ಪರೋಕ್ಷವಾಗಿ ಟಾಂಗ್ ನೀಡಿದ ಪರಮೇಶ್ವರ್, ಸರಕಾರದ ಬಗ್ಗೆ ಒಂದೋ ಸಿಎಂ ಮಾತಾಡಬೇಕು, ಇಲ್ಲವೆ ನಾನು ಅಥವಾ ಸಮನ್ವಯ ಸಮಿತಿ ಅಧ್ಯಕ್ಷರು ಮಾತ್ರ ಮಾತನಾಡುವಂತಾಗಬೇಕು. ಅದು ಬಿಟ್ಟು ಬೇರೆಯವರೆಲ್ಲಾ ಮಾತಾಡಿದ್ರೆ ಗೊಂದಲವಾಗುತ್ತೆ ಎಂದಿದ್ದಾರೆ.

ಪ್ರತ್ಯೇಕ ಬಜೆಟ್‌ ವಿಚಾರದಲ್ಲಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಬೆಂಬಲಿಸಿ ಮಾತನಾಡಿದ ಪರಮೇಶ್ವರ್, ಹೊಸ ಸರಕಾರ ಹೊಸದಾಗಿ ಬಜೆಟ್ ಮಂಡಿಸುವುವು ವಾಡಿಕೆ. ಜತೆಗೆ ಕೆಲವೊಂದು ಬದಲಾವಣೆ ಮತ್ತು ಹೊಸ ಕಾರ್ಯಕ್ರಮಗಳ ಘೋಷಣೆ ಮಾಡಬೇಕಾಗುತ್ತದೆ. ಹೊಸ ಬಜೆಟ್ ಮಂಡಿಸಬೇಕಾ? ಪೂರಕ ಅಂದಾಜು ಮಂಡನೆ ಮಾಡಬೇಕಾ ಅನ್ನೋದರ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಕನಿಷ್ಠ ಕಾರ್ಯಕ್ರಮಗಳ ಜಾರಿ ಬಗ್ಗೆ ಒಂದು ಸಮಿತಿ ರಚನೆ ಮಾಡಿದ್ದೇವೆ. ಹತ್ತು ದಿನದಲ್ಲಿ ಸಮಿತಿ ವರದಿ ನೀಡಿದ ಬಳಿಕ ಈ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡ್ತೇವೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿದ ಹೊರತು ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯನವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಆ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

Comments are closed.