ಕರಾವಳಿ

ಕನಸು ನನಸು : ಜೆಸಿಬಿಯಲ್ಲಿ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ ಪುತ್ತೂರಿನ ಚೇತನ್ ಕುಮಾರ್

Pinterest LinkedIn Tumblr

ಪುತ್ತೂರು, ಜೂನ್. 19: ಮದುವೆ ಅಂದಮೇಲೆ ಏನಾದರೊಂದು ವಿಶೇಷವಿರಬೇಕು ಎಂಬುವುದು ಹೆಚ್ಚಿನವರ ಕನಸು. ಕೆಲವರು ತಮ್ಮ ಮದುವೆ ಡಿಫರೆಂಟಾಗಿ ನಡೆಯಬೇಕೆಂದು ಬಯಸುವವರು ಇದ್ದಾರೆ. ಕೆಲವರು ಅಂತರಿಕ್ಷದಲ್ಲಿ, ಇನ್ನು ಕೆಲವರು ಭೂಗರ್ಭದಲ್ಲಿ ಇನ್ನು ಕೆಲವರು ಮತ್ತೆಲ್ಲೋ ವಿಚಿತ್ರ ರೀತಿಯಲ್ಲಿ ಮದುವೆಯಾಗಿ ದಾಖಲೆ ಬರೆದಿದ್ದಾರೆ.

ಪ್ರತಿಯೊಬ್ಬರಿಗೂ ತಮ್ಮ ಮದುವೆ ವಿಶಿಷ್ಟವಾಗಿರಬೇಕು ಎಂಬ ಬಯಕೆ ಇರುವ ಹಾಗೆ ನಮ್ಮ ದ.ಕ.ಜಿಲ್ಲೆಯ ಪುತ್ತೂರು ಸಮೀಪದ ಸಂಟ್ಯಾರ್ ನಿವಾಸಿ ಚೇತನ್ ಎಂಬುವವರಿಗೂ ತಮ್ಮ ಮದುವೆ ವಿಶಿಷ್ಟ ರೀತಿಯಲ್ಲಿ ನೆರವೇರಬೇಕು ಎಂಬ ಕನಸು.
ಈ ಕನಸು ನನಸು ಮಾಡಲು ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿ ದುಡಿಯುತಿದ್ದ ಚೇತನ್ ಅವರು ತಮ್ಮ ವಿವಾಹವನ್ನು ಜೆಸಿಬಿಯಲ್ಲಿ ನೆರವೇರಿಸಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.

ಚೇತನ್ ಕುಮಾರ್ ಅವರು ಮಮತ ಅವರನ್ನು ಕುಂಬ್ರ ಕೊಯಿಲತಡ್ಕದ ಶಿವಕೃಪಾ ಆಡಿಟೋರಿಯಂ ಹಾಲ್ ನಲ್ಲಿ ಸೋಮವಾರ ವಿವಾಹವಾದರು. ತನ್ನ ವಿವಾಹದಲ್ಲಿ ಏನಾದರು ವಿಶೇಷವಿರಬೇಕು ಎಂಬ ಕನಸು ಕಂಡಿದ್ದ ಚೇತನ್ ಕುಮಾರ್ ಜೆಸಿಬಿಯಲ್ಲೇ ಮದುವೆಯಾಗುವ ಮೂಲಕ ತನ್ನ ಕನಸನ್ನು ನನಸಾಗಿಸಿದ್ದಾರೆ‌.

ವಿವಾಹದ ಬಳಿಕ ಸುಮಾರು ಎರಡು ಕಿ ಮೀ ಜೆಸಿಬಿ ಯಂತ್ರದಲ್ಲೆ ದಿಬ್ಬಣ ಸಂಚಾರ ನಡೆದಿದೆ. ಜೆಸಿಬಿಯಲ್ಲಿ ಮಾಣಿ – ಮೈಸೂರು ರಾ.ಹೆದ್ದಾರಿಯಲ್ಲೆ ದಿಬ್ಬಣ ಸಂಚಾರ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Comments are closed.