ಬೆಂಗಳೂರು: ನನಗೆ ದೊಡ್ಡ ಕಾರುಗಳಲ್ಲಿ ಓಡಾಡಿ ಅಭ್ಯಾಸ. ಹಾಗಾಗಿ ಫಾರ್ಚುನರ್ ಬೇಕು ಎಂದು ಕೇಳಿದ್ದೇನೆ. ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಕಾರನ್ನೇ ಕೊಟ್ಟರೆ ಒಳ್ಳೆಯದು… ಹೀಗೆಂದು ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಬೇಡಿಕೆಯನ್ನು ಹೇಳಿಕೊಂಡಿದ್ದಾರೆ.
ಇಂದು ನಡೆದ ಆಹಾರ ಇಲಾಖೆ ಅಧಿಕಾರಿಗಳ ಸಭೆಗೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿ, ಸಚಿವರಿಗೆ ನೀಡಲಾಗುತ್ತಿರುವ ಕಾರುಗಳ ವಿಚಾರವಾಗಿ ಮೇಲಿನಂತೆ ತಿಳಿಸಿದರು.
ಜಮೀರ್ ಅಹ್ಮದ್ಗೆ ಸಚಿವ ಸ್ಥಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಸ್ಲಿಂ ನಾಯಕರು ಮುನಿಸಿಕೊಂಡಿರುವ ಬಗ್ಗೆ ಮತ್ತು ತನ್ವೀರ್ ಸೇಠ್ ಅವರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಬಗ್ಗೆ ಮಾತನಾಡಿದ ಜಮೀರ್, ನಾನು ರಾಹುಲ್ ಗಾಂಧಿ ನೆಂಟನಲ್ಲ. ನನ್ನ ಸಾಮಾರ್ಥ್ಯ ಗುರುತಿಸಿ ಸಚಿವ ಸ್ಥಾನ ನೀಡಲಾಗಿದೆ. ತನ್ವೀರ್ ಸೇಠ್ ಅವರು ಕ್ಷೇತ್ರ ಬಿಟ್ಟು ಹೊರಗೆ ಹೋಗಲೇ ಇಲ್ಲ. ಕೊನೆಗೆ ತಮ್ಮ ಹುಟ್ಟೂರು ಹುಣಸೂರಿಗೂ ಹೋಗಲಿಲ್ಲ. ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ. ನಾನು ನಾಯಕನಾಗಿ ಬೆಳೆದಿಲ್ಲ ಎಂದು ಹೇಳಿಕೊಳ್ಳುವವರನ್ನು ನಾನೇಕೆ ಸೋಲಿಸುವ ಕೆಲಸ ಮಾಡಲಿ ಎಂದು ಜಮೀರ್ ಸ್ವಪಕ್ಷೀಯ ನಾಯಕನಿಗೇ ತಿರುಗೇಟು ನೀಡಿದರು.
ಸೇಠ್ ಕರೆಯುವ ಯಾವುದೇ ಜಾಗಕ್ಕೆ ನಾನು ಬರುತ್ತೇನೆ. ಅವರೂ ಬರಲಿ. ಯಾರ ಪರ ಜನ ಸೇರುತ್ತಾರೆ ಎಂಬುದನ್ನು ನೋಡೋಣ. ಮಾಧ್ಯಮದವರ ಮುಂದೆಯೇ ಈ ಪರೀಕ್ಷೆ ನಡೆಯಲಿ. ನಾನು ಇದಕ್ಕೆ ಸಿದ್ಧನಿದ್ದೇನೆ. ಅವರ ಕ್ಷೇತ್ರದಲ್ಲಿ ದಿನಾಂಕ ಮತ್ತು ಸ್ಥಳ ಅವರೇ ನಿಗದಿ ಮಾಡಲಿ ಎಂದು ಜಮೀರ್ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಸೈಡ್ಲೈನ್ ಪ್ರಶ್ನೆಯೇ ಇಲ್ಲ
ಇನ್ನು ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಕಡೆಗಣನೆಗೆ ಒಳಗಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಸೈಡ್ ಲೈನ್ ಆಗೋ ಪ್ರಶ್ನೆ ಇಲ್ಲ. ಅವರೇ ನಮಗೆ ನಾಯಕರು. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವೆಂಬುದಿಲ್ಲ ಎಂದರು.
ಬಜೆಟ್ ಕುರಿತು ಉಂಟಾಗಿರುವ ಗೊಂದಲಗಳ ಬಗ್ಗೆ ಮಾತನಾಡಿರುವ ಅವರು, ಬಜೆಟ್ ಮಂಡನೆ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಅವರು ಹೇಳಿಲ್ಲ. ಪೂರ್ಣ ಪ್ರಮಾಣದ ಬಜೆಟ್ ಬೇಡ ಎಂದು ಸಲಹೆ ನೀಡಿದ್ದಾರೆ ಅಷ್ಟೇ ಎಂದರು.
ಹೆಚ್ಚು ಬೆಲೆಗೆ ರಾಗಿ ಖರೀದಿ ಬೇಡ
ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಆದ ಚರ್ಚೆಯ ಕುರಿತು ಮಾತನಾಡಿದ ಜಮೀರ್ , ಇಂದು ಇಲಾಖೆಯ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದ್ದೇನೆ. ಬಜಾರ್ನಲ್ಲಿ ಇರುವ ಬೆಲೆಗಿಂತಲೂ ಹೆಚ್ಚು ಬೆಲೆಗೆ ರೈತರಿಂದ ರಾಗಿ ಖರೀದಿ ಮಾಡಬಾರದು. ಮಾರುಕಟ್ಟೆಯಲ್ಲಿ ೧೯ ರೂಪಾಯಿಗೆ ರಾಗಿ ಸಿಗುತ್ತಿದೆ. ಅಧಿಕಾರಿಗಳು ೨೩ ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಎಲ್ಲಿ ಲೋಪವಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದೇನೆ ಎಂದರು.
ರೋಷನ್ ಬೇಗ್, ನನ್ನ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ
ರೋಷನ್ ಬೇಗ್ ಹಿರಿಯರು, ನಮ್ಮ ನಾಯಕರು. ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಬೇಸರ ಮಾಡಿಕೊಂಡಿದ್ದಾರೆ. ಬೇಸರ ಸಹಜ. ಅದಕ್ಕಾಗಿ ಹಜ್ ಖಾತೆ ಬಗ್ಗೆ ಮಾತಾಡಿದ್ದಾರೆ. ಹಜ್ ಖಾತೆ ನನ್ನನ್ನು ಬಿಟ್ಟರೆ ಖಾದರ್ ಅವರಿಗೆ ಕೊಡಬೇಕು. ಖಾದರ್ ಅವರಿಗೆ ಹಜ್ ಖಾತೆ ಕೊಟ್ರೆ ನನಗೆ ಸಂತೋಷ. ಸಚಿವನಾದ ನಂತರ ಬೇಗ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದ್ರೆ ಅವರು ಹೊರಗಿದ್ದೇನೆಂದು ಹೇಳಿದರು ಎಂದು ತಮ್ಮ ಮತ್ತು ರೋಷನ್ ಬೇಗ್ ನಡುವಿನ ವೈಮನಸ್ಸಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Comments are closed.