ಕರ್ನಾಟಕ

ನಾಲ್ಕೈದು ದಿನ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ

Pinterest LinkedIn Tumblr


ಬೆಂಗಳೂರು: ಮೂರ್‍ನಾಲ್ಕು ದಿನಗಳಿಂದ ಮಂಕಾಗಿದ್ದ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ ಸೇರಿದಂತೆ ಒಳನಾಡು ಪ್ರದೇಶಗಳಲ್ಲಿ ಭಾರ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಅತಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್‌, ಧಾರವಾಡ, ಕಲಬುರಗಿ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂಗಾರು ಸ್ವಲ್ಪ ಚುರುಕಾಗಿದೆ. ಜತೆಗೆ ತೆಲಂಗಾಣ-ಕೊಂಕಣ ಗೋವಾ ನಡುವೆ “ಕಡಿಮೆ ಒತ್ತಡದ ತಗ್ಗು’ (ಟ್ರಫ್) ಉಂಟಾಗಿದ್ದು, ಉತ್ತರ ಒಳನಾಡಿನಲ್ಲೂ ಹಾದುಹೋಗಿದೆ. ಹಾಗಾಗಿ ಉತ್ತರ ಒಳನಾಡಿನ ಶೇ. 50ರಷ್ಟು ಭಾಗದಲ್ಲಿ ಇದು ಮಳೆ ಸುರಿಸಲಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಭಾವ ಹೆಚ್ಚು ಇರಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌. ಪಾಟೀಲ್‌ ತಿಳಿಸಿದ್ದಾರೆ.

ಈ ಮಧ್ಯೆ ಬುಧವಾರ ಮಂಗಳೂರಿನಲ್ಲಿ ಅತಿ ಹೆಚ್ಚು 150 ಮಿ.ಮೀ. ಮಳೆ ದಾಖಲಾಗಿದೆ. ಪಣಂಬೂರು 110 ಮಿ.ಮೀ., ಕೊಲ್ಲೂರು 90, ಪುತ್ತೂರು ಮತ್ತು ಭಾಗಮಂಡಲ 80, ಮೂಡಬಿದರೆ ಹಾಗೂ ಗೋಕರ್ಣದಲ್ಲಿ 70, ಗೇರುಸೊಪ್ಪ ಮತ್ತು ಕುಮಟಾ 60, ಧರ್ಮಸ್ಥಳದಲ್ಲಿ 50 ಮಿ.ಮೀ. ಮಳೆಯಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

Comments are closed.