ಕರ್ನಾಟಕ

ರೈತರ ಸಾಲಮನ್ನಾ ಪ್ರಥಮ ಆದ್ಯತೆ: ವೀರಪ್ಪ ಮೊಯ್ಲಿ

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸುವ ಸಮಿತಿಯ ಮೊದಲ ಸಭೆಯಲ್ಲಿ ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿನ ಯೋಜನೆಗಳನ್ನು ಸೇರಿಸಲು ಪಟ್ಟು ಹಿಡಿದ ಪ್ರಸಂಗ ನಡೆದಿದೆ.

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸುವ ಸಮಿತಿಯಲ್ಲಿ ಕಾಂಗ್ರೆಸ್‌ನ ಆರ್‌.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್‌, ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಹಾಗೂ ಬಂಡೆಪ್ಪ ಕಾಶಂಪೂರ್‌ ಇದ್ದಾರೆ. ರೈತರ ಸಾಲ ಮನ್ನಾ, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ 6 ಸಾವಿರ ರೂ. ಮಾಸಾಶನ ನೀಡುವ ಯೋಜನೆಗಳನ್ನು ಸೇರಿಸಲು ಜೆಡಿಎಸ್‌ ನಾಯಕರು ಪಟ್ಟು ಹಿಡಿದಿದ್ದು, ಕಾಂಗ್ರೆಸ್‌ ಸರ್ಕಾರದ ಹಿಂದಿನ ಎಲ್ಲ ಯೋಜನೆಗಳನ್ನು ಮುಂದುವರಿಸುವುದರ ಜತೆಗೆ ಪ್ರಣಾಳಿಕೆಯ ಕೆಲ ಅಂಶಗಳನ್ನು ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಸಭೆ ನಂತರ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಪ್ರಣಾಳಿಕೆಗಳನ್ನು ಸೇರಿಸಿ ಪ್ರಥಮ ಕರಡು ರಚನೆ ಮಾಡಲಾಗುವುದು. ರೈತರ ಸಾಲ ಮನ್ನಾ ಬಗ್ಗೆ ರೂಪು ರೇಷೆ ಸಿದ್ದ ಪಡಿಸಲಾಗುತ್ತಿದೆ. ಪಂಜಾಬ್‌ ಹಾಗೂ ಕರ್ನಾಟಕದಲ್ಲಿ ಸಾಲ ಮನ್ನಾ ಮಾಡಲಾಗಿದ್ದು, ಪಂಜಾಬ್‌ನಲ್ಲಿ ಸಾಲ ಮನ್ನಾ ಯಶಸ್ವಿಯಾಗಿದೆ. ಅಲ್ಲಿನ ಸಾಲ ಮನ್ನಾ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದರು.

ಕನಿಷ್ಠ ಕಾರ್ಯಕ್ರಮ ರೂಪಿಸುವಲ್ಲಿ ಸಾಲ ಮನ್ನಾಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಎಲ್ಲ ವಿಚಾರಗಳ ಬಗ್ಗೆ ಮೊದಲ ಕರಡು ರಚನೆ ಮಾಡಿದ್ದೇವೆ. ಜೂನ್‌ 25ರಂದು ಮತ್ತೂಂದು ಸಭೆ ಸೇರಿ ಆದಷ್ಟು ಬೇಗ ವರದಿ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಯಲಾದ ಮುಸುಕಿನ ಗುದ್ದಾಟ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖ್ಯಸ್ಥ ಎಂ. ವೀರಪ್ಪ ಮೊಯಿಲಿ ಮಾತನಾಡುತ್ತಿರುವಾಗ ರೇವಣ್ಣ ಮಧ್ಯ ಪ್ರವೇಶಿಸಿ ಜೆಡಿಎಸ್‌ ಅಜೆಂಡಾಗಳ ಬಗ್ಗೆ ಮಾತನಾಡತೊಡಗಿದರು. ಅದಕ್ಕೆ ಡಿ.ಕೆ.ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿ ಅದೆಲ್ಲವನ್ನು ಮುಖ್ಯಮಂತ್ರಿ ಮಾತನಾಡುತ್ತಾರೆ ಬಿಡಿ ಎಂದು ಪತ್ರಿಕಾಗೋಷ್ಠಿಯಿಂದ ಎದ್ದು ಹೊರಟು ಮತ್ತೆ ಆಭಾಸವಾಗಬಾರದು ಎಂದು ವಾಪಸ್‌ ಬಂದು ಪತ್ರಿಕಾಗೋಷ್ಠಿಯಲ್ಲಿ ಕುಳಿತುಕೊಂಡರು.

Comments are closed.