ರಾಷ್ಟ್ರೀಯ

ಹನಿ ನೀರಿಗಾಗಿ ಪರಿತಪಿಸುತ್ತಿರುವ ಬುಂದೇಲ್‌ಖಂಡದ ರಕ್ಷಕರಾದ ಕೊಳವೆಬಾವಿ ಚಾಚಿಯರು!

Pinterest LinkedIn Tumblr


ಭೋಪಾಲ್: ಬಿರುಬೇಸಿಗೆಯಲ್ಲಿ ಬರ ಪೀಡಿತ ಬುಂದೇಲ್‌ಖಂಡದಲ್ಲಿ ಜಲ ಸಂಕಟ ವಿಕೋಪಕ್ಕೆ ಹೋಗಿದೆ. ಪ್ರಾಕೃತಿಕ ಜಲ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ತುಕ್ಕುಗಟ್ಟಿರುವ ಕೊಳವೆಬಾವಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಪ್ರದೇಶದ ಸುತ್ತಮುತ್ತಲು ವಾಸಿಸುವ ಆದಿವಾಸಿ ಜನರು ಹನಿ ಹನಿ ನೀರಿಗಾಗಿ ಪರಿತಪಿಸುವಂತಾಗಿದ್ದು, ಇಂತವರ ಪಾಲಿಗೆ ಆಪದ್ಬಾಂಧವರಂತೆ ಅವತರಿಸಿದೆ ಮಹಿಳೆಯರ ಗುಂಪೊಂದು. ಗ್ರಾಮೀಣ ಜನರು ಇವರನ್ನು ಪ್ರೀತಿಯಿಂದ “ಟ್ಯೂಬ್‌ವೆಲ್ ಚಾಚಿಯರು”ಎಂದು ಕರೆಯುತ್ತಾರೆ

ಸಹಾಯ ಪಡೆಯುವುದೆಂದರೆ ನೀರನ್ನು ಪಡೆಯುವಷ್ಟೇ ಕಷ್ಟ ಎನ್ನಿಸಿಕೊಂಡಿರುವ ಈ ಒಣ ಪ್ರದೇಶದಲ್ಲಿ ಚಾಚಿಯರ ಗುಂಪು ಮಾತ್ರ ರಕ್ಷಕರಂತೆ ಸಹಾಯಕ್ಕೆ ಧಾವಿಸುತ್ತದೆ. ಕೆಟ್ಟು ನಿಂತಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿ ಅಲ್ಲಿ ನೀರು ಜಿನುಗುವಂತೆ ಮಾಡುತ್ತಾರೆ ಈ ಚಾಚಿಯರು. ಕೆಲವೊಮ್ಮೆ 50 ಕಿಲೋಮೀಟರ್ ದೂರದಿಂದಲೂ ಸಹ ಅವರಿಗೆ ಕರೆ ಬರುತ್ತದೆ. ತಕ್ಷಣ ಎದ್ದೇಳುವ ಮಹಿಳೆಯರು ಸ್ಪಾನರ್ ಮತ್ತು ಹ್ಯಾಮರ್‌ ಎತ್ತಿಕೊಂಡು ನೆತ್ತಿ ಸುಡುವ ಬಿಸಿಲಲ್ಲಿ ನಡೆದುಕೊಂಡು ಹೊರಟೇ ಬಿಡುತ್ತಾರೆ.

ನದಿ, ಕೆರೆಗಳೆಲ್ಲ ಬತ್ತಿ ಹೋಗಿದ್ದು ಇಲ್ಲಿನ ಜನರಿಗಿರುವ ಒಂದೇ ಆಸರೆ ಎಂದರೆ ಕೊಳವೆಬಾವಿಗಳು.ಕೆಟ್ಟು ನಿಂತಿರುವ ಅವುಗಳನ್ನು ದುರಸ್ತಿ ಮಾಡುವ ಮೂಲಕ ಹಳ್ಳಿ ಜನರ ಪಾಲಿಗೆ ಜೀವ ರಕ್ಷಕರಾಗಿದ್ದಾರೆ ಚಾಚಿಯರು.

“ಕರೆ ಬರುತ್ತಿದ್ದಂತೆ ನಾವು ಹೊರಟು ನಿಂತೇ ಬಿಡುತ್ತೇವೆ. ಮೀನಾಮೇಷ ಎಣಿಸುವ ಪ್ರಶ್ನೆಯೇ ಇಲ್ಲ”, ಎನ್ನುತ್ತಾರೆ ತಂಡದ ನಾಯಕಿ ಸೀಮಾ.

ಈ ಚಾಚಿಯರ ತಂಡದ 15 ಸದಸ್ಯರು ಝಿರಿಯಾಜೋರ್ ಗ್ರಾಮದ ನಿವಾಸಿಗಳಾಗಿದ್ದಾರೆ. ಸರ್ಕಾರಿ ಅಧಿಕಾರಿಗಳ ಸಹಾಯಕ್ಕೆ ಕಾಯುತ್ತ ಕುಳಿತರೆ ಹನಿ ನೀರಿಗಾಗಿ ಪರದಾಡಬೇಕಾಗುತ್ತದೆ. ನಾವಂತ ಮೂರ್ಖ ಕೆಲಸ ಮಾಡಲು ಹೋಗುವುದೇ ಇಲ್ಲ. ಕೊಳವೆಬಾವಿ ಚಾಚಿಯನ್ನು ಕರೆದು ಬಿಡುತ್ತೇವೆ. ಈ ಬೇಸಿಗೆಯಲ್ಲಿ ಚಾಚಿಯರ ತಂಡ 100ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ದುರಸ್ತಿ ಮಾಡಿದೆ, ಎನ್ನುತ್ತಾರೆ ಸುತ್ತಮುತ್ತಲಿನ ಗ್ರಾಮಸ್ಥರು.

Comments are closed.