ಕರಾವಳಿ

ಮಂಗಳೂರು-ಬಂಟ್ವಾಳ ಸಂಪರ್ಕಿಸುವ ಮುಲಾರಪಟ್ನದ ಫಲ್ಗುಣಿ ಸೇತುವೆ ಕುಸಿತ : ಹಲವು ಊರುಗಳ ಸಂಪರ್ಕ ಕಡಿತ

Pinterest LinkedIn Tumblr

ಮಂಗಳೂರು, ಜೂನ್. 25: ದ.ಕ.ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರು-ಬಂಟ್ವಾಳ ಸಂಪರ್ಕಿಸುವ ಗುರುಪುರ ಹೋಬಳಿಯ ಮುಲಾರಪಟ್ನದ ಫಲ್ಗುಣಿ ಸೇತುವೆ ಮಧ್ಯದಿಂದಲೇ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡಿದೆ.

ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ಮುತ್ತೂರು ಗ್ರಾಮದಲ್ಲಿ ಬಿ.ಸಿ. ರೋಡ್ ಮತ್ತು ಕುಪ್ಪೆಪದವು ಸಂಪರ್ಕಿಸುವ ರಸ್ತೆಯ ನಡುವೆ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಈ ಸೇತುವೆ ಭಾರೀ ಮಳೆಯಿಂದ ಶಿಥಿಲಗೊಂಡಿದ್ದು, ಸೋಮವಾರ ಸಂಜೆ ಮರಿದು ಬಿದ್ದಿದೆ.

ಬಂಟ್ವಾಳ ಸೋರ್ನಾಡು ಮೂಲಕ ಮಂಗಳೂರು ಕುಪ್ಪೆಪದವು ಕೈಕಂಬ, ಕಟೀಲು, ಇರುವೈಲು, ಎಡಪದವು, ಗಂಜಿಮಠ, ಸುರತ್ಕಲ್ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕದ ಕೊಂಡಿಯಾಗಿದ್ದ ಮುಲಾರಪಟ್ನದ ಈ ಸೇತುವೆ ಕುಸಿದು ಬಿದ್ದ ಪರಿಣಾಮ ಇದೀಗ ಈ ಭಾಗದ ಜನರಿಗೆ ಸಂಪರ್ಕ ಕಡಿತಗೊಂಡಿದೆ.

ಕುಪ್ಪೆಪದವು-ಬಿ.ಸಿ.ರೋಡ್ ಸಂಪರ್ಕಿಸುವ ಈ ಸೇತುವೆಯ ಮೂಲಕ ದಿನನಿತ್ಯ ಹಲವು ವಾಹನಗಳು ಸಂಚರಿಸುತ್ತಿದ್ದವು. ಸೇತುವೆ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದ್ದರು ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಈ ಸೇತುವೆಯ ಅಡಿಭಾಗದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯಿಂದ ತಳಭಾಗದಲ್ಲಿ ಅಡಿಪಾಯ ಹಾನಿಗೊಂಡು ಈ ಸೇತುವೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Comments are closed.