ರಾಷ್ಟ್ರೀಯ

ಹಲವು ಯುವಕರಿಗೆ ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟವಳ ಕಥೆ

Pinterest LinkedIn Tumblr


ಬುಲಂದ್‌ಶಹರ್: ಮದುವೆಯಾಗಿ ನಂಬಿಸಿ ಕೈಕೊಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಆದರೆ ಇದು ಯುವತಿಯೋರ್ವಳು ಮದುವೆಯಾಗುವುದಾಗಿ ನಂಬಿಸಿ ಹಲವು ಮಂದಿ ಯುವಕರನ್ನು ವಂಚಿಸಿದ ಪ್ರಕರಣ. ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಯುವಕ ಮತ್ತು ಆತನ ಸಹೋದರಿ ಸೇರಿಕೊಂಡು ಮದುವೆಯ ನಾಟಕವಾಡಿ ಕಳೆದ 2 ವರ್ಷಗಳಲ್ಲಿ ಸುಮಾರು 60 ಮಂದಿಗೆ ವಂಚಿಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಯುವತಿಯ ವಂಚನೆಗೆ ಆಕೆಯ ಸಹೋದರ ಸಾಥ್ ನೀಡಿದ್ದು, ಎಂಜಿನಿಯರ್, ಡಾಕ್ಟರ್‌ ಸಹಿತ ಹಲವರನ್ನು ಇಬ್ಬರು ವಂಚಿಸಿ, ನಗ, ನಗದು ಮತ್ತು ಮೊಬೈಲ್ ಸಹಿತ ಬೆಲೆಬಾಳುವ ವಸ್ತುಗಳನ್ನು ದೋಚಿ ವಂಚಿಸುತ್ತಿದ್ದರು. ಬಂಧಿತರಿಂದ ಪೊಲೀಸರು 5 ಲಕ್ಷ ರೂ. ನಗದು, ಚಿನ್ನ, ಬೆಳ್ಳಿ ಮತ್ತು 17 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

26 ವರ್ಷದ ರಾಣಿ ಎಂಬಾಕೆ ತನ್ನ ಸಹೋದರ ಪ್ರಮೋದ್‌ ಜತೆ ಸೇರಿಕೊಂಡು ಮ್ಯಾಟ್ರಿಮನಿ ವೆಬ್‌ಸೈಟ್ ಮತ್ತು ಪತ್ರಿಕೆಗಳಲ್ಲಿ ವರ ಬೇಕಾಗಿದೆ ಎಂದು ಜಾಹೀರಾತು ನೀಡುತ್ತಿದ್ದರು. ನಂತರ ಅವರನ್ನು ಸಂಪರ್ಕಿಸಿದ ಯುವಕರಿಗೆ, ವಧುವಿನ ತಂದೆ ಎಂದು ಹೇಳಿಕೊಂಡು ಪ್ರಮೋದ್ ಕರೆ ಮಾಡುತ್ತಿದ್ದ. ನಂತರ ಮದುವೆ ಕುರಿತ ಮಾತುಕತೆ ಎಂದು ಹೋಟೆಲ್‌ನಲ್ಲಿ ಮಾತುಕತೆ ನಡೆಸಿದ ಬಳಿಕ ರಾಣಿ ಯುವಕನ ಜತೆ ಹೆಚ್ಚು ಸ್ನೇಹದಿಂದ ಇರುತ್ತಿದ್ದಳು.
ಮದುವೆ ದಿನಾಂಕ ಗೊತ್ತುಪಡಿಸಿ, ಯುವಕನನ್ನು ಕರೆದುಕೊಂಡು ಶಾಪಿಂಗ್ ಎಂದು ಆತನ ಕೈಯಿಂದಲೇ ಹಣ ಖರ್ಚು ಮಾಡಿಸುತ್ತಿದ್ದಳು. ಹೀಗೆ ಮೊಬೈಲ್ ಫೋನ್, ದುಬಾರಿ ಉಡುಗೆ, ಚಿನ್ನಾಭರಣ ಇತ್ಯಾದಿ ವಸ್ತುಗಳನ್ನು ಗಿಫ್ಟ್ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಳು. ಬಳಿಕ ಆತನನ್ನು ತೊರೆದು ಪರಾರಿಯಾಗುತ್ತಿದ್ದಳು.

ಉತ್ತರಾಖಂಡದ ಓರ್ವ ಇಂಜಿನಿಯರ್‌ನನ್ನು ಮದುವೆಯಾಗಿದ್ದ ರಾಣಿ, ಆತನಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿಕೊಟ್ಟು ನಂತರ ಹಣ, ಚಿನ್ನ ಸಹಿತ ಪರಾರಿಯಾಗಿದ್ದಳು. ಮತ್ತೊಂದು ಪ್ರಕರಣದಲ್ಲಿ ಬರೇಲಿ ಮೂಲದ ಡಾಕ್ಟರ್ ಓರ್ವನನ್ನು ಮದುವೆಯಾಗಿದ್ದ ರಾಣಿ, ಶಾಪಿಂಗ್, ಚಿನ್ನ, ವಸ್ತ್ರ ಖರೀದಿ ಎಂದು 2 ಲಕ್ಷ ರೂ. ಪಂಗನಾಮ ಹಾಕಿದ್ದಳು. ಇದೇ ರೀತಿಯಲ್ಲಿ ಶ್ರೀಮಂತ ಯುವಕರನ್ನು ಮದುವೆಯ ಪ್ರಸ್ತಾಪವಿಟ್ಟು ನಂತರ ವಂಚಿಸುತ್ತಿದ್ದಳು.

ಕಳೆದ ಜೂನ್‌ನಲ್ಲಿ ಇಟವಾದ ರಾಹುಲ್ ಸಕ್ಸೇನಾ ಎಂಬಾತನಿಗೂ ಇದೇ ರೀತಿ 60 ಸಾವಿರ ರೂ. ವಂಚಿಸಿದ್ದಳು. ಆದರೆ ಮೋಸ ಹೋಗಿದ್ದ ಆತ ಪೊಲೀಸ್ ದೂರು ನೀಡಿದ್ದು, ಆಕೆಯ ಫೋಟೋ ಮತ್ತು ವಿವರ ನೀಡಿ ತನಿಖೆಗೆ ನೆರವಾಗಿದ್ದ.

ಪ್ರತಿ ಬಾರಿಯೂ ರಾಣಿ ಮತ್ತು ಆಕೆಯ ಸಹೋದರ ಪ್ರತ್ಯೇಕ ಸಿಮ್ ಬಳಸಿ, ನಂತರ ಅದನ್ನು ಬಿಸಾಕುತ್ತಿದ್ದರು. ಜತೆಗೆ ಹಲವಾರು ಮಂದಿ ಮರ್ಯಾದೆಗೆ ಅಂಜಿ ದೂರು ನೀಡದೇ ಇದ್ದಿದ್ದು ವಂಚಕರಿಗೆ ನೆರವಾಗಿತ್ತು.

Comments are closed.