ಕರ್ನಾಟಕ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಆರೋಪಿಗಳಿಗೆ ನ್ಯಾಯಾಂಗ ಬಂಧನ

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ 3ನೇ ಎಸಿಎಂಎಂ ನ್ಯಾಯಾಲಯ ಬುಧವಾರ ನ್ಯಾಯಾಂಗ ಬಂಧನವನ್ನು ಮತ್ತೆ ಹದಿನಾಲ್ಕು ದಿನ ವಿಸ್ತರಿಸಿದೆ.

ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮದ್ದೂರಿನ ಕೆ.ಟಿ.ನವೀನ್‌ ಕುಮಾರ್‌, ವಿಜಯಪುರದ ಪರಶುರಾಮ್‌ ವಾಗೊ¾àರೆ, ಮನೋಹರ್‌ ದುಂಡಪ್ಪ ಯಡವೆ, ಮಹಾರಾಷ್ಟ್ರದ ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌ ಮತ್ತು ಶಿಕಾರಿಪುರದ ಪ್ರವೀಣ್‌ ಅವರ ನ್ಯಾಯಾಂಗ ಬಂಧನ ಅವಧಿ ಮುಗಿದ ಕಾರಣ ಬುಧವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯಿತು.

ಈ ವೇಳೆ “ಎಲ್ಲ ಆರೋಪಿಗಳನ್ನೂ ಒಟ್ಟಿಗೆ ಮತ್ತೆ ವಶಕ್ಕೆ ತೆಗೆದುಕೊಳ್ಳುತ್ತೀರಾ’ಎಂದು ಎಸ್‌ಐಟಿ ಅಧಿಕಾರಿಗಳನ್ನು ನ್ಯಾಯಾಧೀಶರು ಪ್ರಶ್ನಿಸಿ, ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಈ ಮಧ್ಯೆ, ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆಮಂಜ ಜಾಮೀನು ಅರ್ಜಿ ವಿಚಾರಣೆ ಪ್ರಕ್ರಿಯೆಯೂ ಬುಧವಾರ ನಡೆಯಿತು. ನ್ಯಾಯಾಧೀಶರು, ಗುರುವಾರ ಸರ್ಕಾರಿ ಅಭಿಯೋಜಕರಿಗೆ ವಾದ ಮಂಡಿಸಲು ಸೂಚಿಸಿದರು.

ಮಂಪರು ಪರೀಕ್ಷೆಗೆ ಒಪ್ಪಿಗೆ: ನವೀನ್‌ಕುಮಾರ್‌ ಅಲಿಯಾಸ್‌ ಹೊಟ್ಟೆಮಂಜ ಮಂಪರು ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಗುರುವಾರ ಆರೋಪಿ ಪರ ವಕೀಲ ವೇದಮೂರ್ತಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಮೊದಲೇ ಆರೋಪಿ ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಿದ್ದ. ಆದರೆ, ಗುಜರಾತ್‌ಗೆ ಕರೆದೊಯ್ದ ಎಸ್‌ಐಟಿ ಅಧಿಕಾರಿಗಳು ಆತನಿಗೆ ತಪ್ಪು ಮಾಹಿತಿ ನೀಡಿದ್ದರು. ಅಲ್ಲದೆ, ವಕೀಲರ ಭೇಟಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಆತ ನಿರಾಕರಿಸಿದ್ದರಿಂದ ವಾಪಸ್‌ ಕರೆತರಲಾಗಿತ್ತು.

ಇದೀಗ, ತನಗೆ ಜಾಮೀನು ಪಡೆಯಲು ಅದೇ ತೊಡಕಾಗಿದೆ ಎಂಬ ಕಾರಣಕ್ಕೆ ಮಂಪರು ಪರೀಕ್ಷೆಗೆ ಒಪ್ಪಿದ್ದಾನೆ ಎಂದು ಆರೋಪಿ ಪರ ವಕೀಲ ವೇದಮೂರ್ತಿ ತಿಳಿಸಿದರು.

Comments are closed.