ಕರ್ನಾಟಕ

ಮಲೆನಾಡು, ಕರಾವಳಿಯಲ್ಲಿ ಮುಂಗಾರು ಚುರುಕು: ಮುಂದಿನ ಮೂರ್‍ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

Pinterest LinkedIn Tumblr


ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ಬುಧವಾರ ಭಾರೀ ಮಳೆ ಸುರಿದಿದೆ. ಸಿಡಿಲಬ್ಬರದ ಮಳೆಗೆ ಕುಂದಾಪುರದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಈ ಮಧ್ಯೆ, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಆಯ್ದ ಭಾಗಗಳಲ್ಲಿ ಮುಂದಿನ ಮೂರ್‍ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಪೂರಕವಾದ ವಾತಾವರಣ ಇರದೇ ಇರುವುದರಿಂದ ಮುಂಗಾರು ಕ್ಷೀಣಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನದ ನಂತರ ತುಂತುರು ಮಳೆಯಾಯಿತು. ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕುಂದಾಪುರ ತಾಲೂಕಿನ ಹಕ್ಲಾಡಿಯಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ.

ನೂಜಾಡಿಯಲ್ಲಿ ಸಿಡಿಲು ಬಡಿದು ಕರುವೊಂದು ಸಾವನ್ನಪ್ಪಿದೆ. ಕುಂದಾಪುರ -ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಪಾನಕದ ಕಟ್ಟೆ ಬಳಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಬಿದ್ದು, ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೋಟೇಶ್ವರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಸಳ್ವಾಡಿಯಲ್ಲಿ 6- 7 ವಿದ್ಯುತ್‌ ಕಂಬಗಳು ಮುರಿದು ಬಿದ್ದು, ವಿದ್ಯುತ್‌ ತಂತಿಗಳು ನೆಲದಲ್ಲಿ ಜೋತು ಬಿದ್ದಿವೆ. ಅಲ್ಲೇ ಸಮೀಪ ಮರ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಾಲೂಕಿನ ಹಲವೆಡೆ ಗಾಳಿ, ಮಳೆಗೆ ಹಲವು ಮನೆಗಳು ಹಾನಿಗೊಳಗಾಗಿವೆ.

ಕೊಲ್ಲೂರಿನಲ್ಲಿ ಸೌಪಾರ್ಣಿಕಾ ಹಾಗೂ ಕಾಶಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಜನಜೀವನ ಅಸ್ತವ್ಯಸ್ಥಗೊಂಡಿದೆ. ಬಂಟ್ವಾಳ ಸಮೀಪದ ನೇರಂಬೋಲುನ‌ಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಭಂಡಾರಿಬೆಟ್ಟುವಿನಲ್ಲಿ 16ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಲೆನಾಡು ಪ್ರದೇಶಗಳಾದ ಶೃಂಗೇರಿ, ನರಸಿಂಹರಾಜಪುರ, ಶಿರಸಿ, ಸಾಗರ, ಮಡಿಕೇರಿ, ಮೂಡಿಗೆರೆ, ಕೊಪ್ಪ ತಾಲೂಕುಗಳಲ್ಲಿ ಬುಧವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದ್ದು, ಜೀವನದಿಗಳಾದ ತುಂಗಾ, ಭದ್ರಾ, ಅಘನಾಶಿನಿ, ಹೇಮಾವತಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.

ಮುಂದಿನ ಮೂರ್‍ನಾಲ್ಕು ದಿನ ಭಾರೀ ಮಳೆ ಸಾಧ್ಯತೆ:
ಗುಜರಾತ್‌ನ ಕರಾವಳಿ-ಕೇರಳ ಕರಾವಳಿ ಮಧ್ಯೆ ಒತ್ತಡದ ತಗ್ಗು ಪ್ರದೇಶ (ಟ್ರಫ್) ಉಂಟಾಗಿದೆ. ಮತ್ತೂಂದೆಡೆ, ಒಡಿಶಾÏ ಕರಾವಳಿಯಿಂದ ಬಂಗಾಳಕೊಲ್ಲಿಯ ಈಶಾನ್ಯದಲ್ಲೂ ಚಂಡಮಾರುತದ ಪರಿಚಲನೆ ಕಂಡು ಬಂದಿದೆ. ಇದರ ಜತೆ ಮುಂಗಾರು ಮಾರುತಗಳೂ ಇರುವ ಕಾರಣ ರಾಜ್ಯದಲ್ಲಿ ಅದರಲ್ಲೂ, ಕರಾವಳಿ, ಮಲೆನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರದಿಂದ ಜುಲೈ 2ರವರೆಗೆ ಭಾರೀ ಮಳೆಯಾಗುವ ಸಂಭವ ಇದೆ. ಮುಂದಿನ 24 ಗಂಟೆಗಳೊಳಗೆ ಕೇರಳ-ಲಕ್ಷದ್ವೀಪ ಕರಾವಳಿ ತೀರದಲ್ಲಿ ಗಂಟೆಗೆ 35ರಿಂದ 45 ಕಿ.ಮೀ.ವೇಗದಲ್ಲಿ, ಕೆಲ ಸಂದರ್ಭದಲ್ಲಿ 55 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗದಿರುವಂತೆ ಬೆಸ್ತರಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಉತ್ತರ ಕರ್ನಾಟದಲ್ಲಿ ಮುಂಗಾರು ಕ್ಷೀಣ:
ಈ ಮಧ್ಯೆ, ಉತ್ತರ ಒಳನಾಡಿನಲ್ಲಿ ಇದುವರೆಗೆ ವಾಡಿಕೆಯಷ್ಟು ಮಳೆಯಾಗಿದ್ದರೂ, ಜೂ.14ರಿಂದ ಈಚೆಗೆ ಸಾಕಷ್ಟು ಪ್ರಮಾಣದಲ್ಲಿ ಇಳಿಮುಖವಾಗಿದೆ. ಇನ್ನೂ, ಮೂರ್‍ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಈ ಭಾಗದಲ್ಲಿ ಪೂರಕವಾದ ವಾತಾವರಣ ಇರದೇ ಇರುವುದರಿಂದ ಮುಂಗಾರು ಕ್ಷೀಣಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Comments are closed.