ಮುಂಬೈ

ನರೇಂದ್ರ ದಾಭೋಲ್ಕರ್, ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣ: ತನಿಖೆ ತೃಪ್ತಿದಾಯಕವಲ್ಲ ಎಂದ ಬಾಂಬೆ ಹೈಕೋರ್ಟ್

Pinterest LinkedIn Tumblr


ಮುಂಬಯಿ: ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖಾಧಿಕಾರಿಗಳ ವಿರುದ್ಧ ಗರಂ ಆಗಿರುವ ಬಾಂಬೆ ಹೈಕೋರ್ಟ್, ತನಿಖೆ ತೃಪ್ತಿದಾಯಕವಾಗಿಲ್ಲ ಎಂದು ಗುಡುಗಿದೆ. ಅದರ ಜತೆಗೆ ಮುಂದಿನ ವಿಚಾರಣೆಯಲ್ಲಿ ಕಡ್ಡಾಯವಾಗಿ ಹಾಜರಿರಲೇಬೇಕೆಂದು ಸಿಬಿಐನ ಹಿರಿಯ ಅಧಿಕಾರಿಗಳಿಗೆ ಮತ್ತು ಮಹಾರಾಷ್ಟ್ರ ಸರಕಾರಕ್ಕೆ ಸಮನ್ಸ್ ನೀಡಿದೆ.

ಜುಲೈ 12ರಂದು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸಿಬಿಐನ ಜಂಟಿ ನಿರ್ದೇಶಕರು ಹಾಗೂ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಮೂರ್ತಿ ಎಸ್ ಸಿ ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ನೇತೃತ್ವದ ಪೀಠ ಆದೇಶಿಸಿದೆ.

ದಾಭೋಲ್ಕರ್ ಹಾಗೂ ಪನ್ಸಾರೆ ಹತ್ಯೆ ಪ್ರಕರಣ ಸಂಬಂಧ ಸಿಬಿಐ ಮತ್ತು ಸಿಐಡಿ ಅಧಿಕಾರಿಗಳು ಸಲ್ಲಿಸಿದ ತನಿಖಾ ಪ್ರಗತಿ ವರದಿ ತೃಪ್ತಿದಾಯಕವಾಗಿಲ್ಲ ಎಂದು ಪರಿಗಣಿಸಿರುವ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಪ್ರಗತಿ ಸಾಧಿಸಿರುವುದನ್ನು ಉಲ್ಲೇಖಿಸಿರುವ ನ್ಯಾಯಾಲಯ, ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣದಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದೀರಿ ಎಂದು ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಈ ತಿಂಗಳ ಆರಂಭದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿ ಪರುಶುರಾಮ್ ವಾಗ್ಮೋರೆ ಎಂಬಾತನನ್ನು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡ, ಮಹಾರಾಷ್ಟ್ರದಲ್ಲಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.

Comments are closed.