ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಕಾವೇರುತ್ತಿದೆ. ರಾಜ್ಯದ ಲೋಕಸಭೆ ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ಬಿಜೆಪಿ ಹೈಕಮಾಂಡ್ ಬಿ.ಎಸ್. ಯಡಿಯೂರಪ್ಪನವರಿಗೆ ನೀಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಅಂಕುಶ ಹಾಕಿದ್ದ ಹೈಕಮಾಂಡ್ನ ನಿರ್ಧಾರದಿಂದಾಗಿ ರಾಜ್ಯದಲ್ಲಿ ಬಿಜೆಪಿಗೆ ನಿರೀಕ್ಷಿತ ಗೆಲುವು ಸಿಕ್ಕಿರಲಿಲ್ಲ. ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪಾಠ ಕಲಿತುಕೊಂಡಿರುವ ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆಯ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿದೆ.
ಈ ಕಾರಣಕ್ಕೆ ಮತ್ತೆ ರಾಜ್ಯ ಬಿಜೆಪಿ ನಾಯಕರ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಮುಂದಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಲೋಕಸಭೆ ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ವಹಿಸಿದ್ದಾರೆ. ರಾಜ್ಯದ 20 ಕ್ಷೇತ್ರಗಳನ್ನು ಗೆದ್ದುಕೊಡಬೇಕು ಎಂದು ಹೇಳಿರುವ ಹೈಕಮಾಂಡ್ನ ಆದೇಶದಂತೆ ಯಡಿಯೂರಪ್ಪ ಪ್ರಚಾರ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಲೋಕಸಭೆ ಚುನಾವಣೆಯ ಸಿದ್ಧತೆ, ಅಭ್ಯರ್ಥಿ ಆಯ್ಕೆ, ಪ್ರಚಾರ ತಂತ್ರ, ಸಾರ್ವಜನಿಕ ಪ್ರಚಾರ ಕಾರ್ಯಕ್ರಮ ರಾಜ್ಯ ನಾಯಕರ ಹೆಗಲಿಗೆ ಹೊರಿಸಲಾಗಿದೆ. ಪ್ರಬಲ ಅಭ್ಯರ್ಥಿಯ ಆಯ್ಕೆಯ ಜವಾಬ್ದಾರಿಯನ್ನು ಬಿಎಸ್ ವೈ ಸೇರಿದಂತೆ ರಾಜ್ಯದ ಹಿರಿಯ ಬಿಜೆಪಿ ನಾಯಕರಿಗೆ ವಹಿಸಲಾಗಿದೆ. ಹಾಗಾಗಿ, ಒಂದಾದ ನಂತರ ಒಂದು ಸಭೆಗಳನ್ನು ಕರೆಯುವ ಮೂಲಕ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಜನೆ ರೂಪಿಸುತ್ತಿರುವ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ತಮ್ಮ ವರ್ಚಸ್ಸು ಕಳೆಗುಂದಿಲ್ಲ ಎಂದು ಸಾಬೀತುಪಡಿಸಲು ಯಡಿಯೂರಪ್ಪ ಮುಂದಾಗಿದ್ದಾರೆ.
Comments are closed.