ಕರ್ನಾಟಕ

ರಾಜ್ಯದ ಏಜೆನ್ಸಿಗಳಿಗೆ 954 ಕೋಟಿ ಬಾಕಿ ಪಾವತಿ ಮಾಡುವಂತೆ ಕೇಂದ್ರಕ್ಕೆ ಬೇಡಿಕೆ

Pinterest LinkedIn Tumblr


ನವದೆಹಲಿ: ಕಳೆದ ಮೂರು ವರ್ಷದಲ್ಲಿ ಅಕ್ಕಿ ಹಾಗೂ ಬೇಳೆಕಾಳುಗಳನ್ನು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ
ಖರೀದಿಸಿದ್ದಕ್ಕೆ ರಾಜ್ಯದ ಏಜೆನ್ಸಿಗಳಿಗೆ ಕೇಂದ್ರ ಸರ್ಕಾರ 954.26 ಕೋಟಿ ರೂ. ಪಾವತಿ ಬಾಕಿ ಉಳಿಸಿಕೊಂಡಿದ್ದು,
ಶೀಘ್ರ ಪಾವತಿ ಮಾಡಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹಮದ್‌
ಖಾನ್‌ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ದೆಹಲಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ವಿಚಾರವನ್ನು ಖಾನ್‌ ಪ್ರಸ್ತಾಪಿಸಿದ್ದಾರೆ.

ರಾಜ್ಯ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಅಕ್ಕಿ, ಬೇಳೆಕಾಳುಗಳನ್ನು ಖರೀದಿ ಮಾಡಿದೆ. ಆದರೆ ಎಲ್ಲ
ದಾಖಲೆಗಳನ್ನು ಸಲ್ಲಿಸಿದರೂ ಏಜೆನ್ಸಿಗಳಿಗೆ ಮಾಡಬೇಕಾದ ಪಾವತಿ ಸಂದಿಲ್ಲ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಬಡ್ಡಿ ಏರಿಕೆಯಾಗಿದೆ. ಶೀಘ್ರದಲ್ಲೇ ಹಣ ಬಿಡುಗಡೆ ಮಾಡಿ ಎಂದು ಖಾನ್‌ ಕೋರಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಖಾನ್‌, ಕೇಂದ್ರ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದರು.

ಮನೆಗೇ ಪಡಿತರ ತಲುಪಿಸಿ: ಕೇಂದ್ರ ಸರ್ಕಾರ ಸೂಚನೆ
ಹಸಿವಿನಿಂದ ಜನರು ಸಾವನ್ನಪ್ಪುವುದನ್ನು ತಪ್ಪಿಸುವುದಕ್ಕಾಗಿ ಮನೆಗೇ ಪಡಿತರ ಸಾಮಗ್ರಿಗಳನ್ನು ತಲುಪಿಸಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಪಡಿತರ ಸಾಮಗ್ರಿಗಳನ್ನು ನೀಡದ್ದರಿಂದಾಗಿಯೇ ಜನರು ಹಸಿವಿನಿಂದ ಸಾವನ್ನಪ್ಪುವ ಸನ್ನಿವೇಶ ನಿರ್ಮಾಣವಾಗಬಾರ
ದು. ಅಲ್ಲದೆ ಸತತ ಮೂರು ತಿಂಗಳವರೆಗೆ ಪಡಿತರವನ್ನು ಪಡೆಯದ ಕುಟುಂಬದ ಮೇಲೆ ಕಣ್ಣಿಡಬೇಕು ಎಂದೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಫ‌ಲಾನುಭವಿಗಳು ಶ್ರೀಮಂತರಾಗಿದ್ದು, ಅವರಿಗೆ ಪಡಿತರ ಅಗತ್ಯವಿಲ್ಲದಿರಬಹುದು.

ಅಂಥವರ ಪಡಿತರ ಚೀಟಿಯನ್ನು ರದ್ದುಗೊಳಿಸಬೇಕು. ಅಲ್ಲದೆ ಫ‌ಲಾನುಭವಿಗಳು ವೃದ್ಧರು ಮತ್ತು ಅಂಗವಿಕಲರೂ
ಆಗಿರಬಹುದು. ಇಂತಹ ಸಂದರ್ಭದಲ್ಲಿ ಮನೆಗೇ ಪಡಿತರವನ್ನು ತಲುಪಿಸಬೇಕು ಎಂದು ಪಾಸ್ವಾನ್‌ ಸೂಚಿಸಿದ್ದಾರೆ.

Comments are closed.