ಬೆಂಗಳೂರು: ಬಹುಕೋಟಿ ಸಾಲ ಸುಸ್ತಿದಾರರಾಗಿ ದೇಶ ತೊರೆದಿರುವ ವಿಜಯ್ ಮಲ್ಯ ಅವರ ಐಷಾರಾಮಿ ವಿಮಾನ (ನೋಂದಣಿ ಸಂಖ್ಯೆ A319-133C VT-VJM MSN 2650) 35ಕೋಟಿ ರೂ.ಗೆ ಹರಾಜಾಗಿದೆ.
ಕಾನೂನು ಸಂಬಂಧಿತ ಶಿಷ್ಟಾಚಾರ ಕಾರಣ ಕನಿಷ್ಠ ಮೂರು ಬಾರಿ ಈ ಹರಾಜು ಪ್ರಕ್ರಿಯೆ ವಿಫಲಗೊಂಡಿದ್ದು, ಹೈಕೋರ್ಟ್ ನಿರ್ದೇಶನದ ಅನುಸಾರ ಈಗ ಹರಾಜುಗೊಂಡಿದೆ.
ಅಮೆರಿಕ ಮೂಲದ ಏವಿಯೇಷನ್ ಮ್ಯಾನೇಜ್‌ಮೆಂಟ್ ಸೇಲ್ಸ್ ಎಲ್‌ಎಲ್‌ಸಿ ಹೆಚ್ಚಿನ ಬಿಡ್ ಮೂಲಕ ಈ ವಿಮಾನವನ್ನು ಖರೀದಿಸಿದೆ. ಹೈಕೋರ್ಟ್ 34.8 ಕೋಟಿ ರೂ. ಬಿಡ್‌ಗೆ ಅನುಮತಿಸಿತ್ತು.
ಸರ್ವಿಸ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ನಡೆಸಿದ ಅತಿ ದೊಡ್ಡ ಹರಾಜು ಇದಾಗಿದೆ. ಮಲ್ಯ ಒಡೆತನದಲ್ಲಿ ಇದ್ದ, ಈಗ ದಿವಾಳಿಯಾಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಪಾವತಿಸಬೇಕಿದ್ದ ತೆರಿಗೆ, ಶುಲ್ಕಗಳನ್ನು ವಸೂಲಿ ಮಾಡಲು ಈ ಹರಾಜು ಕೈಗೊಂಡಿತ್ತು.
ಇದೊಂದು ಅತಿ ಐಷಾರಾಮಿ ವಿಮಾನವಾಗಿದ್ದು, ಒಳಾಂಗಣ ವಿನ್ಯಾಸಕ್ಕೆ ಸಾಟಿಯೇ ಇಲ್ಲ ಎಂಬಂತಿದ್ದು, ಈಗಿನ ಬೆಲೆ ಸುಮಾರು 684 ಕೋಟಿ 45 ಲಕ್ಷ ರೂ. ಆಗಿದೆ. ಐದು ವರ್ಷದಿಂದ ನಿಲ್ಲಿಸಿದ್ದ ಈ ವಿಮಾನ ಹಾರಾಟಕ್ಕೆ ಸುಸ್ಥಿತಿಯಲ್ಲಿಲ್ಲದ ಕಾರಣ ಕಡಿಮೆ ಬೆಲೆಗೆ ಹರಾಜಾಗಿದೆ.
ವಿಮಾನವು ಆರು ಸಿಬ್ಬಂದಿ ಮತ್ತು 25 ಪ್ರಯಾಣಿಕರನ್ನು ಒಳಗೊಳ್ಳುವಷ್ಟು ವಿಶಾಲವಾಗಿದೆ. ಬೆಡ್‌ರೂಂ, ಬಾತ್‌ರೂಂ, ಬಾರ್, ಕಾನ್ಫರೆನ್ಸ್ ಹಾಲ್ ಸೇರಿದಂತೆ ಅನೇಕ ಸೌಲಭ್ಯಗಳಿವೆ.
2013 ರಲ್ಲಿ ಸೇವಾ ತೆರಿಗೆ ಇಲಾಖೆಯು ಮುಂಬಯಿ ಛತ್ರಪತಿ ವಿಮಾನ ನಿಲ್ದಾಣದಿಂದ ಈ ವಿಮಾನವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದಕ್ಕಾಗಿ ಇಲಾಖೆ ಮುಂಬಯಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿ ಅನುಮತಿ ಪಡೆದಿತ್ತು.
Comments are closed.