ಹೊಸದಿಲ್ಲಿ: ಮುಂಗಾರು ಮಳೆ ಒಂದು ತಿಂಗಳೊಳಗೆ ಇಡೀ ದೇಶವನ್ನೇ ವ್ಯಾಪಿಸಿದೆ. ಸಾಮಾನ್ಯವಾಗಿ ಜುಲೈ 15ರ ವೇಳೆಗೆ ಮುಂಗಾರು ಇಡೀ ದೇಶಕ್ಕೆ ವ್ಯಾಪಿಸಿರುತ್ತದೆ. ಆದರೆ, ಈ ಬಾರಿ ವಿಶ್ವ ದಾಖಲೆ ಕೀರ್ತಿಗೆ ಪಾತ್ರರಾಗಿರುವ ಓಟಗಾರ ಉಸೇನ್ ಬೋಲ್ಟ್ನಂತೆ ವೇಗವಾಗಿ ತಲುಪಿರುವುದು ಅಚ್ಚರಿ ಉಂಟು ಮಾಡಿದೆ.
ಜೂನ್ 13 ರಿಂದ 9 ದಿನಗಳ ಕಾಲ ಮುಂಗಾರು ಹವಾಮಾನ ಬೇರೆ ಪ್ರದೇಶಗಳಿಗೆ ಚಲಿಸಿರಲಿಲ್ಲ. ಹೀಗಾಗಿ 2010ರಲ್ಲಿ 13 ದಿನಗಳ ಕಾಲ ಮುಂಗಾರು ಬಿಡುವು ತೆಗೆದುಕೊಂಡಂತೆ ಈ ಬಾರಿಯೂ ಹೆಚ್ಚು ಬಿಡುವು ತೆಗೆದುಕೊಳ್ಳುತ್ತದೆಂದು ಊಹಿಸಲಾಗಿತ್ತಾದರೂ ಬಳಿಕ ಉಲ್ಟಾ ಆಗಿದೆ. ಮೊದಲಿಗೆ ನಿಧಾನವಾಗಿ ಚಲಿಸಿದ ಮುಂಗಾರು, ನಂತರ ಉಸೇನ್ ಬೋಲ್ಟ್ನಂತೆ ತೀವ್ರ ಸ್ವರೂಪದ ವೇಗ ಪಡೆದುಕೊಂಡು ರಾಷ್ಟ್ರ ರಾಜಧಾನಿ ದಿಲ್ಲಿಗೆ ಸಾಮಾನ್ಯಕ್ಕಿಂತ ಒಂದು ದಿನ ಮೊದಲೇ ಅಂದರೆ ಜೂನ್ 28ರಂದು ಪ್ರವೇಶ ಮಾಡಿದೆ. ಅಲ್ಲದೆ, ಜುಲೈ 15ರಂದು ಇಡೀ ದೇಶವನ್ನು ಆವರಿಸಿಕೊಳ್ಳಬೇಕಿದ್ದ ಮುಂಗಾರು ಹವಾಮಾನ, 17 ದಿನ ಮುಂಚಿತವಾಗೇ ಆವರಿಸಿರುವುದು ಅಚ್ಚರಿ.
ಮುಂಗಾರು ಋತು ಸಾಮಾನ್ಯವಾಗಿ ಜೂನ್ 1 ರಂದು ಆರಂಭಗೊಂಡು ಸೆಪ್ಟೆಂಬರ್ 30ರವರೆಗೆ ಇರುತ್ತದೆ. ಈ ಬಾರಿ ಕೇರಳಕ್ಕೆ ಮೇ 29ರಂದು ಅಂದರೆ ಮೂರು ದಿನ ಮುಂಚಿತವಾಗೇ ಪ್ರವೇಶ ಮಾಡಿತ್ತು. ಇನ್ನು, ಜೂನ್ನಲ್ಲಿ ಶೇಕಡಾವಾರು 17 ರಷ್ಟು , ಜುಲೈನಲ್ಲಿ ಶೇ. 32, ಆಗಸ್ಟ್ನಲ್ಲಿ ಶೇ. 28 ಹಾಗೂ ಸೆಪ್ಟೆಂಬರ್ನಲ್ಲಿ ಶೇ. 23ರಷ್ಟು ವಾಡಿಕೆ ಮಳೆ ಬೀಳುತ್ತದೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ನೈರುತ್ಯ ಮುಂಗಾರು ಋತುವಿನ ಮೂಲಕವೇ ಶೇ. 70ರಷ್ಟು ಮಳೆ ದೇಶಕ್ಕೆ ಕೊಡುಗೆಯಾಗಿ ನೀಡುತ್ತದೆ.
Comments are closed.