ರಾಷ್ಟ್ರೀಯ

ನಕಲಿ ಬಿಟ್‌ಕಾಯಿನ್ ಮೂಲಕ ಉದ್ಯಮಿಗೆ 35 ಲಕ್ಷ ವಂಚನೆ

Pinterest LinkedIn Tumblr


ಹೈದರಾಬಾದ್: ಬಿಟ್‌ಕಾಯಿನ್ ಬಳಕೆಗೆ ಆರ್‌ಬಿಐ ನಿರ್ಬಂಧ ಹೇರಿ ಅದನ್ನು ಅನಧಿಕೃತ ಎಂದು ಘೋಷಿಸಿದ್ದರೂ, ಹೈದರಾಬಾದ್‌ನಲ್ಲಿ ಉದ್ಯಮಿಯೋರ್ವ ನಕಲಿ ಬಿಟ್‌ಕಾಯಿನ್‌ಗೆ 35 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ನಾಲ್ವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ವಿಶಾಖಪಟ್ಟಣಂನಲ್ಲಿ ಉದ್ಯಮ ಸ್ಥಾಪನೆಗೆ ನೆರವು ನೀಡುವುದಾಗಿ ಮನೇಶ್ ಎಸ್‌ ಯಾದವ್ ಎಂಬವರಿಗೆ 60 ಕೋಟಿ ರೂ. ಬೆಲೆಬಾಳುತ್ತದೆ ಎಂದು ನಂಬಿಸಿ ನಕಲಿ ಬಿಟ್‌ಕಾಯಿನ್ ನೀಡಲಾಗಿತ್ತು. ಈ ಸಂಬಂಧ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ವಾಸಿ ರೆಡ್ಡಿ ರಾಧಾ ರಾಣಿ, ಪೊನ್ನಂಪತಿ ಪ್ರವೀರ್ಣ ಕುಮಾರ್ ರೆಡ್ಡಿ, ಪೊನ್ನಂಪತಿ ಪ್ರಕಾಶ್ ರೆಡ್ಡಿ ಮತ್ತು ಕಠಾರಿ ಕೊಂಡ ಬಾಲರಾಮುಡು ಎಂಬ ನಾಲ್ವರನ್ನು ಬಂಧಿಸಿದ್ದಾರೆ.

ವಂಚಕರು ಮನೇಶ್ ಉದ್ಯಮ ಆರಂಭಿಸಲು ವಿವಿಧ ಬ್ಯಾಂಕ್‌ಗಳಿಂದ 180 ಕೋಟಿ ರೂ. ಸಾಲ ಒದಗಿಸುವುದಾಗಿ ಅದಕ್ಕೆ ಕಮಿಷನ್ ಎಂದು ಆರಂಭದಲ್ಲಿ 10 ಲಕ್ಷ ರೂ. ಪಡೆದುಕೊಂಡಿದ್ದರು. ನಂತರ ಸಾಲ ಒದಗಿಸಲು ಸಮಸ್ಯೆಯಾಗಿದೆ ಎಂದು ಹೇಳಿದ್ದು, ಅದಕ್ಕೆ ಪ್ರತಿಯಾಗಿ ಬಿಟ್‌ಕಾಯಿನ್ ರೂಪದಲ್ಲಿ 60 ಕೋಟಿ ರೂ. ಪಾವತಿಸುವುದಾಗಿ ಹೇಳಿದ್ದರು.

ಅದನ್ನು ನಂಬಿದ್ದ ಮನೇಶ್ 25 ಲಕ್ಷ ರೂ. ಕಮಿಷನ್ ಎಂದು ಪಾವತಿಸಿದ್ದು, ಒಟ್ಟಾರೆ 35 ಲಕ್ಷ ರೂ. ವಂಚಕರಿಗೆ ನೀಡಿದ್ದರು. ಕೊನೆಗೆ ಮೋಸ ಹೋಗಿದ್ದು ಗೊತ್ತಾಗಿ ವಂಚಕರ ವಿರುದ್ಧ ದೂರು ದಾಖಲಿಸಿದ್ದರು.

Comments are closed.