ಕರ್ನಾಟಕ

ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಂತೆ ಮುಖ್ಯಮಂತ್ರಿಗೆ ವಿನಂತಿಸಿ ಯುವಕ ಆತ್ಮಹತ್ಯೆಗೆ ಶರಣು!

Pinterest LinkedIn Tumblr


ದಾವಣಗೆರೆ: ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ವಿನಂತಿಸಿ ಯುವಕನೊರ್ವ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಚನ್ನಗಿರಿ ತಾಲೂಕಿನ ಹೊಸನಗರದಲ್ಲಿ ಮಂಗಳವಾರ ನಡೆದಿದೆ.

ಅನಿಲ್‌. ಬಿ (22) ನೇಣಿಗೆ ಶರಣಾದ ವಿದ್ಯಾರ್ಥಿ. ಈತ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಂಎ ಓದುತ್ತಿದ್ದ. ನೇಣಿಗೆ ಶರಣಾಗುವ ಮುನ್ನ ಮೊಬೈಲ್‌ನಲ್ಲಿ ಹೇಳಿಕೆ ರೆಕಾರ್ಡ್‌ ಮಾಡಿ, ಡೆತ್​ನೋಟ್​ ಬರೆದು, ಉದ್ಯೋಗ ಸೃಷ್ಟಿಗೆ ವಿನಂತಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿವೆ. ರಾಜಕಾರಣಿಗಳು ತಮ್ಮ ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ ಮಾತ್ರ ಉದ್ಯೋಗ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯಾವುದೇ ಉದ್ಯೋಗ ದೊರೆಯುತ್ತಿಲ್ಲ. ಸರ್ಕಾರದ ನಡೆಗೆ ಬೇಸತ್ತು ಸಾವನ್ನಪ್ಪುತ್ತಿದ್ದೇನೆ ಎಂದು ಯುವಕ ವಿಡಿಯೋ ಹಾಗೂ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾನೆ.

ಕರ್ನಾಟಕ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಯುವಕರನ್ನು ಪರಿಗಣನೆಗೆ ತೆಗೆದುಕೊಂಡು ಉದ್ಯೋಗ ಸೃಷ್ಟಿ ಮಾಡಲಿ. ಗ್ರಾಮೀಣ ಪ್ರದೇಶದಲ್ಲಿ ಪದವಿಯನ್ನು ಪಡೆದಿರುವ ವಿದ್ಯಾರ್ಥಿಗಳು ಕೂಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ನಾನೊಬ್ಬ ವಿದ್ಯಾರ್ಥಿಯಾಗಿ, ಬಡ ಕುಟುಂಬದ ವ್ಯಕ್ತಿಯಾಗಿ, ಯುವಕನಾಗಿ ಹಾಗೂ ನಿರುದ್ಯೋಗಿಯಾಗಿ ಸರ್ಕಾರಕ್ಕೆ ನನ್ನ ಸಾವಿನಿಂದ ವರದಿಯನ್ನು ನೀಡುತ್ತಿದ್ದೇನೆ. ನನ್ನ ಸಾವಿನಿಂದಾದರೂ ಎಚ್ಚೆತ್ತು ವಿದ್ಯಾವಂತ ಯುವಕರಿಗೆ ಉದ್ಯೋಗ ಸೃಷ್ಟಿಸಿ, ಬಡತನ ನಿವಾರಣೆ ಮಾಡಲಿ, ನನ್ನ ಸಾವು ವಿದ್ಯಾವಂತ ಯುವಕರಿಗೆ ಹಾಗೂ ನಿರುದ್ಯೋಗಿಗಳಿಗೆ ಮಾತ್ರ ಅರ್ಥವಾಗುತ್ತದೆ. ಆದ್ದರಿಂದ ಸರ್ಕಾರ ಉದ್ಯೋಗವನ್ನು ಸೃಷ್ಟಿಸಿ, ಯುವಕರನ್ನು ಉಳಿಸಿ ಎಂದು ಡೆತ್​ನೋಟ್​ ಬರೆದಿಟ್ಟು ವಿನಂತಿ ಮಾಡಿಕೊಂಡಿದ್ದಾನೆ.

Comments are closed.