ಕ್ರೀಡೆ

ರಾಹುಲ್ ಶತಕದಬ್ಬರ- ಕುಲ್‌ದೀಪ್ ಬೌಲಿಂಗ್’ಗೆ ಶರಣಾದ ಇಂಗ್ಲೆಂಡ್; ಭಾರತಕ್ಕೆ ಮೊದಲ ಭರ್ಜರಿ ಜಯ

Pinterest LinkedIn Tumblr

ಮ್ಯಾಂಚೆಸ್ಟರ್: ಇಂಗ್ಲೆಂಡ್​​ನ ಮ್ಯಾಂಚೆಸ್ಟರ್​​ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಭಾರತ ನಡುವಣ ಮೊದಲ ಟಿ-20 ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ರಾಹುಲ್ ಅವರ ಅಮೋಘ ಶತಕ ಹಾಗೂ ಕುಲ್ದೀಪ್ ಯಾದವ್ ಅವರ ಸ್ಪಿನ್ ದಾಳಿಗೆ ಇಂಗ್ಲೆಂಡ್ ತಂಡ ಭಾರತ ಎದುರು ಸೋಲೊಪ್ಪಿಕೊಂಡಿದೆ.

ಮೊದಲು ಟಾಸ್ ಸೋತು ಬ್ಯಾಟಿಂಗ್ ಪ್ರಾರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾಸ್ ಬಟ್ಲರ್ ಸ್ಪೋಟಕ ಆರಂಭ ನೀಡಿದರು. ಮೊದಲ ವಿಕೆಟ್​ಗೆ ಈ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ರಾಯ್ 20 ಎಸೆತಗಳಲ್ಲಿ 5 ಬೌಂಡರಿ ಸಹಿತ 30 ರನ್​ಗಳಿಸಿ ಔಟ್ ಆದರು. ಬಳಿಕ ಬಂದ ಯಾವ ಬ್ಯಾಟ್ಸ್​ಮನ್​ಗಳು ಕ್ರೀಸ್​ ಕಚ್ಚಿ ಆಡಲಿಲ್ಲ. ಕುಲ್ದೀಪ್ ಯಾದವ್ ಅವರ ಸ್ಪಿನ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಮುಖಮಾಡಿದರು. ಅಲೆಕ್ಸ್ ಹೇಲ್ಸ್ ಕೇಲವ 8 ರನ್​ಗೆ ನಿರ್ಗಮಿಸಿದರೆ, ನಾಯಕ ಮಾರ್ಗನ್(8), ಬೈರಿಸ್ಟೋ ಹಾಗೂ ಜೋ ರೂಟ್ ಶೂನ್ಯಕ್ಕೆ ಔಟ್ ಆದರು. ಬಳಿಕ ಬಂದ ಮೊಯೀನ್ ಅಲಿ ಕೂಡ ಕೇವಲ 6 ರನ್​ಗೆ ಸುಸ್ತಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ, ಇತ್ತ ಏಕಾಂಗಿ ಹೋರಾಟ ನಡೆಸಿದ ಜಾಸ್ ಬಟ್ಲರ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಏರಿಸಿದರು. 46 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸ್​ನೊಂದಿಗೆ 69 ರನ್ ಸಿಡಿಸಿ ಬಟ್ಲರ್ ಔಟ್ ಆದರು. ಬಳಿಕ ಕೊನೆ ಹಂತದಲ್ಲಿ ಮಿಂಚಿದ ಡೇವಿಡ್ ವಿಲ್ಲಿ 15 ಎಸೆತಗಳಲ್ಲಿ 2 ಬೌಂಡರಿ ಹಾಗು 2 ಸಿಕ್ಸ್​ನೊಂದಿಗೆ 29 ರನ್ ಬಾರಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಕುಲ್ದೀಪ್ ಯಾದವ್ 24 ರನ್​ಗೆ 5 ವಿಕೆಟ್ ಕಿತ್ತು ಮಿಂಚಿದರೆ, ಉಮೇಶ್ ಯಾದವ್ 2 ಹಾಗೂ ಯಜುವೇಂದ್ರ ಚಹಾಲ್ 1 ವಿಕೆಟ್ ಪಡೆದರು.

ಇತ್ತ 160 ರನ್​ಗಳ ಸಾಧಾರಣ ಮೊತ್ತ ಬೆನ್ನಟ್ಟದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಲಿಲ್ಲ. ಶಿಖರ್ ಧವನ್ ಮೊದಲ ಓವರ್​​ನಲ್ಲೇ ಕೇವಲ 4 ರನ್​ಗಳಿಸಿ ಔಟ್ ಆದರು. ಬಳಿಕ ರೋಹಿತ್ ಜೊತೆಗೂಡಿದ ಕನ್ನಡಿಗ ಕೆ. ಎಲ್. ರಾಹುಲ್ ಅವರು ಸ್ಪೋಟಕ ಆಟಕ್ಕೆ ಮುಂದಾದರು. ಸಿಡಿಲಬ್ಬರದ ಬ್ಯಾಟಿಂಗ್ ಆರಂಭಿಸಿದ ರಾಹುಲ್ ಇಂಗ್ಲೆಂಡ್ ಬೌಲರ್​​ಗಳ ಬೆವರಿಳಿಸಿದರು. ಇತ್ತ ಮೈದಾನದ ಮೂಲೆಮೂಲೆಗೆ ರಾಹುಲ್ ಅವರು ಚೆಂಡನ್ನು ಅಟ್ಟುತ್ತಿದ್ದರೆ ರೋಹಿತ್ ಅವರು ರಾಹುಲ್​ಗೆ ಉತ್ತಮ ಸಾತ್ ನೀಡಿದರು. ಎರಡನೇ ವಿಕೆಟ್​ಗೆ ಈ ಜೋಡಿ 123 ರನ್​​ಗಳ ಕಾಣಿಕೆ ನೀಡಿತು. ರೋಹಿತ್ ಶರ್ಮಾ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 32 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ನಾಯಕ ಕೊಹ್ಲಿ ಜೊತೆ ಗೂಡಿದ ರಾಹುಲ್ ಅವರು ತಮ್ಮ ಸ್ಪೋಟಕ ಆಟವನ್ನು ಮುಂದುವರೆಸಿ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಭಾರತ ಇನ್ನು 10 ಬೌಲ್ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ರಾಹುಲ್ ಅವರು 54 ಎಸೆತದಲ್ಲಿ 10 ಬೌಂಡರಿ ಹಾಗೂ 5 ಸಿಕ್ಸ್​​​ನೊಂದಿಗೆ 101 ರನ್ ಸಿಡಿಸಿ ಅಜೇಯರಾಗಿ ಉಳಿದರೆ, ಕೊಹ್ಲಿ 20 ರನ್​ ಗಳಿಸಿ ಔಟ್ ಆಗದೆ ಉಳಿದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ ಹಾಗೂ ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದರು.

ಈ ಮೂಲಕ ಭಾರತ 8 ವಿಕೆಟ್​​ಗಳ ಭರ್ಜರಿ ಗೆಲುವಿನೊಂದಿಗೆ, ಮೂರು ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಜೊತೆಗೆ ಧೋನಿ ಅವರು ಈ ಪಂದ್ಯದಲ್ಲಿ ಬೈರಿಸ್ಟೋ ಹಾಗೂ ಜೋ ರೂಟ್ ಅವರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ 33 ಸ್ಟಂಪ್ ಮಾಡಿ ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

Comments are closed.