ರಾಷ್ಟ್ರೀಯ

ವಿದ್ಯಾರ್ಥಿನಿಯರ ಒಳ ಉಡುಪಿಗೂ ವಸ್ತ್ರ ಸಂಹಿತೆ: ನಿಯಮ ಹಿಂಪಡೆದ ಪುಣೆ ಶಾಲೆ

Pinterest LinkedIn Tumblr


ಪುಣೆ: ಭಾರೀ ವಿರೋಧದ ಬಳಿಕ ಪುಣೆಯ ಪ್ರತಿಷ್ಠಿತ ವಿಶ್ವಶಾಂತಿ ಗುರುಕುಲ ವಿದ್ಯಾಸಂಸ್ಥೆಯು ವಿವಾದಿತ ವಿದ್ಯಾರ್ಥಿನಿಯರಿಗೆ ವಿಧಿಸಿದ್ದ ಒಳ ಉಡುಪು ವಸ್ತ್ರ ಸಂಹಿತೆಯನ್ನ ಹಿಂಪಡೆದಿದೆ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿನಿಯರು ಬಿಳಿ ಬಣ್ಣದ ಒಳ ಉಡುಪನ್ನ ಮಾತ್ರ ಧರಿಸಬೇಕೆಂದು ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು.

ಇದರ ವಿರುದ್ಧ ಮಕ್ಕಳ ಪೋಷಕರು ಬೀದಿಗಿಳಿದಿದ್ದರು. ಇದು ಅತ್ಯಂತ ಹೀನ ಮತ್ತು ಖಾಸಗಿತನದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಪೋಷಕರ ವಿರೋಧದ ಬಳಿಕವೂ ಶಾಲೆಯ ಆಡಳಿತ ಮಂಡಳಿ ನಿಯಮ ಸಡಿಲಗೊಳಿಸಿರಲಿಲ್ಲ. ವಿದ್ಯಾರ್ಥಿನಿಯರ ಭದ್ರತೆ ದೃಷ್ಟಿಯಿಂದ ನಿಯಮ ಜಾರಿ ಮಾಡಿರುವುದಾಗಿ ಸ್ಪಷ್ಟನೆ ಕೊಟ್ಟಿತ್ತು. ಪ್ರತಿ ದಿನ ಈ ಬಗ್ಗೆ ಶಾಲಾ ಡೈರಿಯಲ್ಲಿ ಖಚಿತಪಡಿಸಬೇಕು. ತಪ್ಪಿದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿತ್ತು.

ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದನ್ನ ಅರಿತ ಶಿಕ್ಷಣ ಸಚಿವ ವಿನೋದ್ ತಾವ್ಡೆ ಮಧ್ಯಪ್ರವೇಶ ಮಾಡಿ ಪುಣೆಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸುವಂತೆ ಆದೇಶ ನೀಡಿದ್ದರು.ಬಳಿಕ ಶಾಲೆಗೆ ಭೇಟಿ ನಿಡಿದ್ದ ಅಧಿಕಾರಿಗಳ ತಂಡ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿತ್ತು. ಕೂಡಲೇ ಆದೇಶ ಹಿಂಪಡೆಯುವಂತೆ ಶಾಲಾ ಆಡಳಿತ ಮಂಡಳಿಗೆ ಆದೇಶ ನೀಡಿತ್ತು.

ಬಳಿಕ ವಿವಾದ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಆಡಳಿತ ಮಂಡಳಿ, ಬೇಷರತ್ತಾಗಿ ನಮ್ಮ ಆದೇಶವನ್ನ ಹಿಂಪಡೆಯುತ್ತಿದ್ದೇವೆ. ಇದು ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ರೂಪಿಸಿದ್ದ ನಿಯಮ. ಯಾವುದೇ ಭಾವನೆಗೆ ಧಕ್ಕೆ ತರುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

Comments are closed.