ರಾಷ್ಟ್ರೀಯ

11 ಮಂದಿಯ ಬುರಾರಿ ಆತ್ಮಹತ್ಯೆ ಪ್ರಕರಣ: ಭಾಟಿಯಾ ಕುಟುಂಬಕ್ಕೆ ನೇಣು ಆಚರಣೆಯಾಗಿತ್ತು

Pinterest LinkedIn Tumblr


ಹೊಸದಿಲ್ಲಿ: ಬುರಾರಿ ಆತ್ಮಹತ್ಯೆ ಪ್ರಕರಣದ ಭಾಟಿಯಾ ಕುಟುಂಬ ‘ನೇಣು ಹಾಕಿಕೊಳ್ಳುವ ಧಾರ್ಮಿಕ ಆಚರಣೆ’ಯ (ಅವರ ಪ್ರಕಾರ ಅದೊಂದು ಧಾರ್ಮಿಕ ಆಚರಣೆ) ಹೊರತಾಗಿಯೂ ಬದುಕಿ ಬರುವ ಆತ್ಮವಿಶ್ವಾಸ ಹೊಂದಿತ್ತು. ಅಲ್ಲದೆ, ಸಮಸ್ಯೆಯಲ್ಲಿರುವ ತಮ್ಮ ಸಂಬಂಕರ ಮನೆಯಲ್ಲಿ ಆ ಧಾರ್ಮಿಕ ಆಚರಣೆಯನ್ನು ಪುನರಾವರ್ತಿಸುವ ಯೋಜನೆಯನ್ನೂ ಹಾಕಿಕೊಂಡಿತ್ತು ಎಂದು ಹೊಸದಿಲ್ಲಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸಾವಿನ ಮನೆಯಲ್ಲಿ ದೊರೆತ ಕೈಬರಹದ ಟಿಪ್ಪಣಿಗಳು ಹಾಗೂ ನೆರೆಹೊರೆಯ ಸಿಸಿಟಿವಿಗಳ ದೃಶ್ಯ ತುಣುಕುಗಳ ಆಧಾರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ದಿಲ್ಲಿ ಪೊಲೀಸರು, ”ಅವರ ಆ ‘ಧಾರ್ಮಿಕ ಆಚರಣೆ’ (ನೇಣು ಹಾಕಿಕೊಳ್ಳುವುದು) ಏಳು ದಿನಗಳ ‘ಕೃತಜ್ಞತಾ ಸಮಾರಂಭ’ದ ಒಂದು ಭಾಗವಷ್ಟೆ. ಸಾವಿನ ಬಗ್ಗೆ ಅವರು ಯೋಚಿಸಿರಲೇ ಇಲ್ಲ,” ಎಂದು ಹೇಳಿದ್ದಾರೆ.

ಏಳು ದಿನಗಳ ಕೃತಜ್ಞತಾ ಸಮಾರಂಭದ ಕೊನೆಯ ಹಂತವಾಗಿ 7ನೇ ದಿನ ಅವರೆಲ್ಲರೂ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದರು.

”ಸಾವಿನ ಮನೆಯಲ್ಲಿ ದೊರೆತ ಟಿಪ್ಪಣಿ ಪ್ರಕಾರ, ಭಾಟಿಯಾ ಕುಟುಂಬ ‘ಧಾರ್ಮಿಕ ಆಚರಣೆ’ಯನ್ನು ಟೀನಾ (ಲಲಿತ್‌ ಭಾಟಿಯಾ ಪತ್ನಿ) ಸಹೋದರಿ ಮಮತಾ ಮನೆಯಲ್ಲಿ ಪುನರಾವರ್ತಿಸುವ ಯೋಜನೆ ಹಾಕಿಕೊಂಡಿತ್ತು. ಆದರೆ, ಆ ಯೋಜನೆ ಮಮತಾ ಅವರ ಗಮನಕ್ಕೆ ಬಂದಿರಲೇ ಇಲ್ಲ,” ಎಂದು ಪೊಲೀಸ್‌ ಅಕಾರಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 2007ರಲ್ಲಿ ಕುಟುಂಬದ ಹಿರಿಯ ಭೋಪಾಲ್‌ ಸಿಂಗ್‌ ತೀರಿಕೊಂಡ ಕೆಲವೇ ತಿಂಗಳಲ್ಲಿ ಭಾಟಿಯಾ ಕುಟುಂಬದ ಧಾರ್ಮಿಕ ಆಚರಣೆ ಆರಂಭಗೊಂಡಿತ್ತು. ಭೋಪಾಲ್‌ ಸತ್ತ ಬಳಿಕ ಕುಟುಂಬದಲ್ಲಿ ಇದ್ದಕ್ಕಿದ್ದಂತೆ ದಾರಿದ್ರ್ಯ ಕಾಣಿಸಿಕೊಂಡಿತ್ತು. ಭೋಪಾಲ್‌ ಅವರ 3ನೇ ಮಗ ಲಲಿತ್‌ ಭಾಟಿಯಾರಂತೂ ತೀರಾ ಕಂಗೆಟ್ಟಿದ್ದರು. ಅವರು ಒಂದು ದಿನ ಇದ್ದಕ್ಕಿದ್ದಂತೆ, ತಮಗೆ ಮೃತ ತಂದೆಯ ಆತ್ಮದಿಂದ ಪ್ರೇರಣೆಯಾಗಿದೆಯೆಂದೂ, ಕುಟುಂಬದ ಮುಖ್ಯಸ್ಥನಾಗುವಂತೆ ಸಲಹೆ ನೀಡಿದೆಯೆಂದೂ ಹೇಳುತ್ತಾರೆ. ಅಂದಿನಿಂದ ಲಲಿತ್‌ ಭಾಟಿಯವರನ್ನು ಅವರ ತಾಯಿ ಹೊರತುಪಡಿಸಿ ಮನೆಯಲ್ಲಿರುವವರೆಲ್ಲರೂ ‘ಡ್ಯಾಡಿ’ ಎಂದೇ ಕರೆಯುತ್ತಿದ್ದರು. ಅದಾದ ಬಳಿಕ, ಕಷ್ಟಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಏಳು ದಿನಗಳ ಧಾರ್ಮಿಕ ಆಚರಣೆ ಮಾಡಬೇಕು ಎಂದು ಕುಟುಂಬ ಸದಸ್ಯರಿಗೆ ಭಾಟಿಯಾ ಆದೇಶ ನೀಡಿದ್ದರು.

Comments are closed.