ರಾಷ್ಟ್ರೀಯ

ಝಾಕಿರ್ ನಾಯ್ಕ್ ಬಾಂಗ್ಲಾಕ್ಕೆ ಬರಲು ಅವಕಾಶ ಕೊಡುವುದಿಲ್ಲ: ಪ್ರಧಾನಿ ಸಹವರ್ತಿ

Pinterest LinkedIn Tumblr


ನವದೆಹಲಿ: ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಬಾಂಗ್ಲಾದೇಶಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಬಾಂಗ್ಲಾದೇಶ ಹೇಳಿದೆ.
ನವದೆಹಲಿಯಲ್ಲಿ ಮಾತನಾಡಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಸಹವರ್ತಿ ಹುಸೇನ್ ಟೌಫೀಕ್ ಇಮಾಮ್ ಅವರು, ವಿಚಾರಣೆ ನಿಮಿತ್ತ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ನನ್ನು ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ಬಾಂಗ್ಲಾದೇಶ ಸಂಪೂರ್ಣ ಸಹಕಾರ ನೀಡಲಿದೆ. ಯಾವುದೇ ಕಾರಣಕ್ಕೂ ಬಾಂಗ್ಲಾದೇಶದ ಗಡಿಯನ್ನು ಯಾವುದೇ ಕಾರಣಕ್ಕೂ ಭಾರತದ ವಿರುದ್ಧ ಬಳಕೆ ಮಾಡಲು ತಾವು ಅನುವು ಮಾಡಿಕೊಡುವುದಿಲ್ಲ. ಝಾಕಿರ್ ನಾಯ್ಕ್ ಬಾಂಗ್ಲಾದೇಶಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಸಲಹೆಗಾರರು ಕೂಡ ಆಗಿರುವ ಹುಸೇನ್ ಟೌಫೀಕ್ ಇಮಾಮ್ ಅವರು ದೆಹಲಿಯಲ್ಲಿ ನಡೆದ ‘ಇಂಡೋ-ಬಾಂಗ್ಲಾದೇಶ: ಐತಿಹಾಸಿಕ ಮತ್ತು ಸಮಕಾಲೀನ ದೃಷ್ಟಿಕೋನ’ ಎಂಬ ವಿಚಾರದ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಸಂಬಂಧ ಸುಧಾರಣೆ, ಭದ್ರತಾ ಸಹಕಾರ ಮತ್ತು ವಾಣಿಜ್ಯ ಸಹಕಾರದ ಕುರಿತು ಇಮಾಮ್ ಮಾತನಾಡಿದರು.
ಉಗ್ರವಾದ ಕುರಿತು ಬಾಂಗ್ಲಾದೇಶ ತನ್ನ ಶೂನ್ಯ ಅಸಹಿಷ್ಟುತೆ ನೀತಿಯನ್ನು ಮುಂದುವರೆಸಲಿದ್ದು, ಭಾರತಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಯಾವುದೇ ಕಾರಣಕ್ಕೂ ಝಾಕಿರ್ ನಾಯ್ಕ್ ತಮ್ಮ ದೇಶ ಪ್ರವೇಶ ಮಾಡಲು ಅವಕಾಶ ನೀಡುವುದಿಲ್ಲ. ಬಾಂಗ್ಲಾದೇಶ ಕೂಡ ಭಯೋತ್ಪಾದನೆಯಿಂದ ನಲುಗಿದೆ. 2016ರಲ್ಲಿ ಢಾಕಾದ ಹೋಲಿ ಆರ್ಟಿಸನ್ ಬೇಕರಿ ಕೆಫೆಯಲ್ಲಿನ ಉಗ್ರ ದಾಳಿ ಇನ್ನೂ ನಮ್ಮ ಕಣ್ಣ ಮುಂದಿದೆ. ಅಂದು ದಾಳಿ ನಡೆಸಿದ್ದ ದಾಳಿಕೋರರು ಇದೇ ಝಾಕಿರ್ ನಾಯ್ಕ್ ಪ್ರಚೋದನಾತ್ಮಕ ಭಾಷಣದಿಂದ ಪ್ರೇರಿತರಾಗಿದ್ದರು. ದಾಳಿಕೋರರಲ್ಲಿ ಓರ್ವನಾಗಿದ್ದ ಉಗ್ರ ರೋಹನ್ ಇಮ್ತಿಯಾಜ್ ಇದೇ ಝಾಕಿರ್ ನಾಯ್ಕ್ ಭಾಷಣವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಎಂದು ಹೇಳಿದ್ದಾರೆ.

Comments are closed.