ಬೆಂಗಳೂರು: ಕುಡಿಯಲು ಹಣ ಕೊಡದ ಕಾರಣ ವ್ಯಕ್ತಿಯೊಬ್ಬ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಪತ್ನಿಯನ್ನೇ ಕೊಂದ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕಸಂದ್ರದ ಬೋನ್‌ಮಿಲ್‌ನಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮಧ್ಯಪ್ರದೇಶದ ಕಸ್ತೂರಿ (35) ಕೊಲೆಯಾದ ಮಹಿಳೆ. ಈ ಸಂಬಂಧ ಮೃತಳ ಪತಿ ರಾಜಾಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಮೂಲದ ದಂಪತಿ 12 ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದು, ಸೋಲದೇವನಹಳ್ಳಿಯ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಒಂದರಲ್ಲಿ ರಾಜಸಿಂಗ್ ಕೂಲಿ ಕಾರ್ಮಿಕನಾಗಿದ್ದ. ಚಿಕ್ಕಸಂದ್ರದ ಬೋನ್‌ಮಿಲ್‌ನಲ್ಲಿ ಕೂಲಿ ಕಾರ್ಮಿಕರಿಗಾಗಿ ನಿರ್ಮಿಸಿರುವ ಶೆಡ್‌ನಲ್ಲಿ ಪತ್ನಿ ಹಾಗೂ ಈಕೆಯ ಸಹೋದರಿ ಜತೆ ಆರೋಪಿ ವಾಸವಾಗಿದ್ದ.
ನಗರಕ್ಕೆ ಬಂದ ಆರಂಭದ ಮೂರು ದಿನ ಮಾತ್ರ ಕೆಲಸಕ್ಕೆ ಹೋಗಿದ್ದ ಆರೋಪಿ, ನಂತರ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಮದ್ಯ ಸೇವಿಸಿ ಬರುತ್ತಿದ್ದ ಆರೋಪಿ ಪತ್ನಿ ಮತ್ತು ಈಕೆಯ ಸಹೋದರಿ ಮೇಲೆ ಹಲ್ಲೆ ನಡೆಸುತ್ತಿದ್ದ.
ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಮದ್ಯ ಸೇವಿಸಿ ಮನೆಗೆ ಬಂದ ರಾಜಾಸಿಂಗ್, ಕೆಲ ಹೊತ್ತಿನ ಬಳಿಕ ಮದ್ಯ ಸೇವಿಸಲು 30 ರೂ. ಕೊಡುವಂತೆ ಪತ್ನಿ ಕಸ್ತೂರಿಗೆ ಕೇಳಿದ್ದಾನೆ. ಹಣ ಕೊಡಲು ನಿರಾಕರಿಸಿದ ಪತ್ನಿ ಕೊನೆಗೆ 20 ರೂ. ಕೊಟ್ಟಿದ್ದಾರೆ.
ಆದರೂ ಆರೋಪಿ ಇನ್ನೂ 10 ರೂ. ನೀಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ಹೋಗಿದೆ. ಆಕ್ರೋಶಗೊಂಡ ರಾಜಾಸಿಂಗ್, ಸಿಮೆಂಟ್ ಇಟ್ಟಿಗೆಯನ್ನು ಆಕೆ ಮೇಲೆ ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಾಯಗೊಂಡ ಕಸ್ತೂರಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.