ಕರಾವಳಿ

ಹಳ್ಳಹಿಡಿಯುತ್ತಿದ್ದ ಕೇಸಿಗೆ ಮರುಜೀವ: ಅತ್ಯಾಚಾರ ಮಾಡಿದ ಅಪರಾಧಿಗೆ 7 ವರ್ಷ ಸಜೆ

Pinterest LinkedIn Tumblr

ಉಡುಪಿ: ಹಳ್ಳಹಿಡಿಯುವ ಸ್ಥಿತಿಯಲ್ಲಿದ್ದ ಯುವತಿಯೋರ್ವಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸರಕಾರಿ ವಕೀಲರು ಹಾಗೂ ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಕಾರ್ಯತತ್ಪರತೆಯು ಇಂದು ತಪ್ಪಿತಸ್ಥ ಅಪರಾಧಿ ಜೈಲುಕಂಬಿ ಹಿಂದೆ ಹೋಗುವಂತೆ ಮಾಡಿದೆ.

ಆಗಿದ್ದೊಂದು..ಮಾಡಿದ ಕೇಸು ಬೇರೊಂದು!
ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಣೂರು ಎಂಬಲ್ಲಿ ಕೇಮಾರು ಸಸಿಹಿತ್ಲು ಪಾಲಡ್ಕದ ನಿವಾಸಿ ಯೋಗೀಶ್ ಎಂಬಾತ 19 ವರ್ಷ ಪ್ರಾಯದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಸುಮಾರು 10 ವರ್ಷಗಳ ಹಿಂದೆ ಅಂದರೆ 2010ನೇ ಇಸವಿಯ ಜನವರಿ ತಿಂಗಳ 18 ರಂದು ಮಧ್ಯಾಹ್ನದ ಸುಮಾರಿಗೆ ಆ ಯುವತಿಯನ್ನು ಕಾಡು ಪ್ರದೇಶಕ್ಕೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಅಲ್ಲದೇ ಆಕೆ ಮೇಲೆ ಬಲತ್ಕಾರ ಮಾಡುವುದನ್ನು ಮೊಬೈಲ್ ಪೋನ್ ಮೂಲಕ ಫೋಟೋಗಳನ್ನು ಸೆರೆಹಿಡಿದು ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡಿ ತನ್ನೊಂದಿಗೆ ದೈಹಿಕ ಸಂಪರ್ಕ ಮಾಡುವಂತೆ ಬೆದರಿಕೆಯನ್ನು ಒಡ್ಡುತ್ತಿದ್ದ. ತನ್ನ ಬೇಡಿಕೆಗೆ ಒಪ್ಪದಿದ್ದರೆ ಅಶ್ಲೀಲ ಫೋಟೋಗಳನ್ನು ಶೇರ್‍ ಮಾಡುವುದಾಗಿಯೂ ಬೆದರಿಸಿದ್ದ. ಕೊನೆಗೂ ನೊಂದ ಯುವತಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ತನಗಾದ ಅನ್ಯಾಯದ ವಿರುದ್ಧ ದೂರು ನೀಡಿದರೂ ಕೂಡ ಅತ್ಯಾಚಾರ ಪ್ರಕರಣವನ್ನು ಪೊಲೀಸರು ದಾಖಲು ಮಾಡಿರಲಿಲ್ಲ ಎನ್ನಲಾಗಿದ್ದು ಮಹಿಳಾ ದೌರ್ಜನ್ಯ (ಐಪಿಸಿ ಕಲಂ 354) ಕಾಯ್ದೆಯಡಿ ಮಾತ್ರ ಪ್ರಕರಣ ದಾಖಲಿಸಿದ್ದರು.

(ಅಂದಿನ ಕಾರ್ಕಳ ಎಪಿಪಿ ಪ್ರಕಾಶ್ಚಂದ್ರ ಶೆಟ್ಟಿ)

ನೊಂದಾಕೆಗೆ ನೆರವಾದ ಎ.ಪಿ.ಪಿ.
ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ತರುವಾಯ ನೊಂದ ಯುವತಿ ಒಮ್ಮೆ ಕಾರ್ಕಳ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿಯವರಲ್ಲಿ ತನಗಾದ ಸಂಪೂರ್ಣ ಅನ್ಯಾಯದ ಬಗ್ಗೆ ತಿಳಿಸಿ ನ್ಯಾಯ ಒದಗಿಸುವಂತೆ ಕೇಳಿಕೊಳ್ಳುತ್ತಾಳೆ. ಆಕೆಗಾದ ಅನ್ಯಾಯ ಕೇಳಿ ಒಂದುಕ್ಷಣ ಪ್ರಕಾಶ್ಚಂದ್ರ ಶೆಟ್ಟಿಯವರು ದಂಗಾಗುತ್ತಾರೆ. ಈ ಬಗ್ಗೆ ನ್ಯಾಯಾಲಯದ ಗಮನ ಸೆಳೆದು ಅತ್ಯಾಚಾರ, ಬೆದರಿಕೆ, ಅಶ್ಲೀಲ ಫೋಟೋ ದುರ್ಬಳಕೆ ಬಗ್ಗೆಯೂ ತನಿಖೆಯಾಗಬೇಕೆಂದು ನ್ಯಾಯಾಧೀಶರನ್ನು ಕೋರಿಕೊಳ್ಳುತ್ತಾರೆ. ಆವಾಗಲೇ ಈ ಪ್ರಕರಣಕ್ಕೊಂದು ಬಿಗ್ ಟ್ವಿಸ್ಟ್ ಸಿಗುತ್ತೆ.

(ಅಂದಿನ ಕಾಪು ಸಿಪಿಐ ಸುನೀಲ್ ವೈ. ನಾಯ್ಕ್)

ಕಾರ್ಕಳ ಕೇಸು ಕೈಗೆತ್ತಿಕೊಂಡ ಕಾಪು ಸಿಪಿಐ…
ಪ್ರಕರಣ ನಡೆದಿದ್ದು ಕಾರ್ಕಳ ವ್ಯಾಪ್ತಿಯಲ್ಲಿ. ಆದ್ರೆ ನ್ಯಾಯಾಲಯಈ ಪ್ರಕರಣದ ಕೂಲಂಕುಷ ತನಿಖೆ ನಡೆಸುವಂತೆ ಆದೇಶಿಸಿದ್ದೇ ಅಂದಿನ ಉಡುಪಿ ಎಸ್ಪಿ ಅಣ್ಣಾಮಲೈ ಅವರು ಈ ಬಗ್ಗೆ ತನಿಖಾಧಿಕಾರಿಯಾಗಿ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಸುನೀಲ್ ವೈ. ನಾಯ್ಕ್ ಅವರನ್ನು ನೇಮಿಸುತ್ತಾರೆ. ಯುವತಿಯ ಹೇಳಿಕೆ, ಅಶ್ಲೀಲ ಫೋಟೋಗಳ ಸಿಡಿ ಮೊದಲಾದ ಸಾಕ್ಷ್ಯಗಳನ್ನು ಕ್ರೋಢಿಕರಿಸಿದ ಸುನೀಲ್ ನಾಯ್ಕ್ ಅವರು ಪ್ರಕರಣದ ವಿಸ್ತ್ರತವಾದ ದೋಷಾರೋಪಣ ಪಟ್ಟಿಯನ್ನು ಸಿದ್ದಪಡಿಸಿ 2015ರ ಮೇ.25ರಂದು ನ್ಯಾಯಾಲಯಕ್ಕೆ ನೀಡುತ್ತಾರೆ.

ಆರೋಪಿ ಸದ್ಯ ಅಪರಾಧಿ…!
ಶನಿವಾರ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ಅಂತಿಮ ವಿಚಾರಣೆ ನಡೆದಿದ್ದು ಆರೋಪಿ ಯೋಗೀಶನ ವಿರುದ್ಧ ಮಾಡಲಾದ ಎಲ್ಲಾ ಆರೋಪಣೆಗಳು ಸಾಭೀತಾದ ಹಿನ್ನಲೆಯಲ್ಲಿ ಆತನನ್ನು ದೋಷಿಯೆಂದು ತೀರ್ಪು ನೀಡಿದೆ. ಇಲ್ಲಿನ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ್ ಅವರು ಅಪರಾಧಿಗೆ ಅತ್ಯಾಚಾರ ಪ್ರಕರಣ 376ರ ಅಡಿಯಲ್ಲಿ 7 ವರ್ಷ ಸಜೆ ಮತ್ತು 10 ಸಾವಿರ ದಂಡ, ಐಪಿಸಿ ಕಲಂ 292 ಮತ್ತು 506ಕ್ಕೆ ತಲಾ 6 ತಿಂಗಳು ಜೈಲು ವಾಸ ಮತ್ತು 1 ಸಾವಿರ ದಂಡ, ಕಲಂ 67(ಎ) ಐಟಿ ಕಾಯ್ದೆಯಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದ್ದರು.

(ಯೋಗೀಶ್ ಕುಂಭಾಸಿ)

Comments are closed.