ಕರಾವಳಿ

ಸಿಗಡಿ (ಚಟ್ಲಿ) ಕೆರೆಗೆ ಕೆಮಿಕಲ್‌ ಸಿಂಪಡಿಸಿದ ದುಷ್ಕರ್ಮಿಗಳು: 35 ಲಕ್ಷ ಮೌಲ್ಯದ ಸಿಗಡಿ ನಾಶ

Pinterest LinkedIn Tumblr

ಕುಂದಾಪುರ: ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಾಟೆಯಲ್ಲಿರುವ ಸಿಗಡಿ ಕೆರೆಗೆ ದುಷ್ಕರ್ಮಿಗಳು ಭಾನುವಾರ ತಡರಾತ್ರಿ ಕೆಮಿಕಲ್ ಸಿಂಪಡಿಸಿದ ಪರಿಣಾಮ ಸುಮಾರು ಒಂಭತ್ತು ಟನ್ ಗೂ ಅಧಿಕ ಸಿಗಡಿ ನಾಶವಾದ ಕಳವಳಕಾರಿ ಘಟನೆ ವರದಿಯಾಗಿದೆ.

ಬಂಟ್ವಾಡಿ ನಿವಾಸಿ ನರಸಿಂಹ ಮೊಗವೀರ ಎಂಬವರಿಗೆ ಸಂಬಂಧಿಸಿದ ಎರಡೂ ಸಿಗಡಿ ಕೆರೆಗೂ ದುಷ್ಕರ್ಮಿಗಳು‌ ಕೆಮಿಕಲ್‌ ಸಿಂಪಡಿಸಿದ್ದರಿಂದ ಸುಮಾರು ಮೂವತ್ತೈದು ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಉತ್ತರಪ್ರದೇಶದ ಈರ್ವರು ಕಾವಲು ಕಾಯುತ್ತಿದ್ದು, ಸಿಗಡಿ ಸಾಕಷ್ಟು ಬೆಳೆದಿದ್ದರಿಂದ ಸಿಗಡಿ ಕೆರೆ ಮಾಲೀಕ ನರಸಿಂಹ ಮೊಗವೀರರು ಕೂಡ ರಾತ್ರಿ ವೇಳೆಯಲ್ಲಿ ಕಾಯಲು ಬರುತ್ತಿದ್ದರು. ಭಾನುವಾರ ರಾತ್ರಿಯೂ ಕೂಡ 12.30 ಕ್ಕೆ ಕೆರೆ ಸುತ್ತ ತಿರುಗಿ ಮರಳಿ ಶೆಡ್ ನಲ್ಲಿ‌ ಮಲಗಿದ್ದರು. ಮತ್ತೆ 4.30 ರ ಸುಮಾರಿಗೆ ಎದ್ದು ಬ್ಯಾಟರಿ ಹಿಡಿದು ನೋಡುವಾಗ ಸಣ್ಣ ಪ್ಲಾಸ್ಟಿಕ್‌ ಡಬ್ಬ ಕೆರೆಯಲ್ಲಿ ತೇಲುತ್ತಿತ್ತು. ಇದನ್ನು ಗಮನಿಸಿದ‌ ನರಸಿಂಹ ಅವರು ಕೆಲಸಗಾರರನ್ನು ಎಬ್ಬಿಸಿ ಹತ್ತಿರ ಹೋಗಿ ನೋಡುವಾಗ ಕೃತ್ಯ ಬೆಳಕಿಗೆ ಬಂದಿದೆ. ಅಷ್ಟರಲ್ಲಾಗಲೇ ಸಿಗಡಿಗಳು ಕೆರೆಯಲ್ಲಿ ಸತ್ತು ತೇಲಲು ಆರಂಭಿಸಿದ್ದು, ಕೂಡಲೇ ಸಮೀಪದಲ್ಲಿರುವ ಇನ್ನೊಂದು ಕೆರೆಯಲ್ಲಿ ನೋಡಿದಾಗಲೂ ಅಲ್ಲಿಯೂ ಪ್ಲಾಸ್ಟಿಕ್ ಡಬ್ಬ ತೇಲುತ್ತಿತ್ತು.

ಈ ಹಿಂದೆಯೂ ಕೂಡ ಸಣ್ಣ ಡಬ್ಬದಲ್ಲಿ ಕಿಡಿಗೇಡಿಗಳು ಕೆಮಿಕಲ್‌ ಸಿಂಪಡಿಸಿ ಪರಾರಿಯಾಗಿದ್ದರು. ಆಗಲೂ ಸ್ವಲ್ಪ ಪ್ರಮಾಣದಲ್ಲಿ ಸಿಗಡಿಗಳು ನಾಶವಾಗಿದ್ದವು.

ಸಿಗಡಿ ಮರಿ ಕೆರೆಗೆ ಬಿಟ್ಟು ಸುಮಾರು ನೂರಹತ್ತು ದಿನಗಳಾಗಿದ್ದು, ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಹಾರ್ವೆಸ್ಟ್ ಮಾಡಿ ಮಾರುಕಟ್ಟೆಗೆ ಮಾರುವವರಿದ್ದರು ಎನ್ನಲಾಗಿದೆ.

ಈ ಕುರಿತು ಮಾಧ್ಯಮದ ಮುಂದೆ ತಮ್ಮ ನೋವನ್ನು ಹಂಚಿಕೊಂಡ ನರಸಿಂಹ ಮೊಗವೀರರು, ಸಿಗಡಿಗಳು ಸಾಕಷ್ಟು ಬೆಳೆದಿದ್ದು, ಅದನ್ನು ಮೂರ್ನಾಲ್ಕು ದಿನಗಳಲ್ಲಿ ಹಿಡಿದು ಮಾರುಕಟ್ಟೆಗೆ ಮಾರುತ್ತಿದ್ದೆವು. ನೂರಕ್ಕೂ ಅಧಿಕ ದಿನಗಳ‌ ಕಾಲ ಸಿಗಡಿ ಪಾಲನೆ ಮಾಡಿದ್ದೆವು. ನನ್ನ ಪತ್ನಿಯ ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟಿದ್ದೇನೆ. ನನಗ್ಯಾರು ಶತ್ರುಗಳಿಲ್ಲ ಎಂದು ಕಣ್ಣೀರಾದರು.

ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.