ಅಂತರಾಷ್ಟ್ರೀಯ

ಕಗ್ಗತ್ತಲಿನ ಗುಹೆಯೊಳಗೆ ಬಾಲಕರು ಬದುಕುಳಿದಿದ್ದು ಹೇಗೆ?

Pinterest LinkedIn Tumblr


ಫೆಚಾಬುರಿ(ಥಾಯ್ಲೆಂಡ್): ಎಲ್ಲಿ ನೋಡಿದರೂ ಕತ್ತಲು, ಉಸಿರಾಡಲೂ ಕಷ್ಟವಾದ ಪರಿಸ್ಥಿತಿ, ಕಾಲಿಗೆ ಎಡತಾಕುವ ನೀರು, ಯಾವುದೇ ಕ್ಷಣದಲ್ಲಾದರೂ ಸಾವು ಎದುರಾಗುವ ಆತಂಕ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಥಾಯ್ಲೆಂಡ್​ನ ಗುಹೆಯೊಳಗೆ ಸಿಲುಕಿದ್ದ 12 ಬಾಲಕರು ಮತ್ತು ಅವರ ಫುಟ್​ಬಾಲ್​ ತರಬೇತುದಾರರ ಬದುಕುಳಿದಿದ್ದು ಹೇಗೆ ಎಂಬುದೇ ಒಂದು ಕುತೂಹಲಕಾರಿ ಸಂಗತಿ.

ಹೌದು, ಗುಹೆಯೊಳಗೆ ಆಮ್ಲಜನಕದ ಪ್ರಮಾಣ ತೀರಾ ಕಡಿಮೆ ಪ್ರಮಾಣದಲ್ಲಿತ್ತು. ಉಸಿರಾಟದ ತೊಂದರೆಯಿಂದ ಬಾಲಕರು ಮೃತಪಡುವ ಸಾಧ್ಯತೆ ಇತ್ತು. ಆದರೆ ಫುಟ್​ಬಾಲ್​ ಆಟಗಾರರೊಂದಿಗೆ ಇದ್ದ ತರಬೇತುದಾರ 25 ವರ್ಷದ ಎಕಾಪೊಲ್ ಚಾಂಥವಾಂಗ್ ಬಾಲಕರು ಆತಂಕಕ್ಕೆ ಒಳಗಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಕ್ಕಳಿಗೆ ಧ್ಯಾನ ಹೇಳಿಕೊಟ್ಟು ಅವರಿಂದ ಧ್ಯಾನ ಮಾಡಿಸುವ ಮೂಲಕ ಆತಂಕ ದೂರವಾಗಿ ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳಲು ಅವರಿಗೆ ನೆರವು ನೀಡಿದ್ದಾರೆ ಎಂದು ವರದಿಯಾಗಿದೆ.

ಜತೆಗೆ ಗುಹೆಯೊಳಗೆ ಸುಮಾರು 4.5 ಕಿ.ಮೀ. ದೂರದಲ್ಲಿ ಸಿಲುಕಿದ್ದ ಬಾಲಕರ ಬಳಿಗೆ ತೆರಳಿದ ರಕ್ಷಣಾ ಸಿಬ್ಬಂದಿ ಬಾಲಕರು ಧ್ಯಾನ ಮಾಡುತ್ತಿರುವುದನ್ನು ಮತ್ತು ಯಾರೂ ಭಯ ಪಡದೆ ಶಾಂತ ಚಿತ್ತದಿಂದ ಇದ್ದದ್ದನ್ನು ನೋಡಿದ್ದರು ಎಂದು ವರದಿಯಾಗಿದೆ.

ಬೌದ್ಧ ಸನ್ಯಾಸಿಯಾಗಿದ್ದ ಎಕಾಪೊಲ್​

ಎಕಾಪೊಲ್​ ಚಾಂಥವಾಂಗ್​ ಫುಟ್​ಬಾಲ್​ ಕೋಚ್​ ಆಗುವುದಕ್ಕೂ ಮುನ್ನ ಬೌದ್ಧ ಸನ್ಯಾಸಿಯಾಗಿದ್ದರು. 12 ವರ್ಷಕ್ಕೆ ಬೌದ್ಧ ಸನ್ಯಾಸಿಯಾಗಿದ್ದ ಅವರು ಆ ನಂತರ 10 ವರ್ಷಗಳ ಕಾಲ ಮೇ ಸಾಯಿ ಮಾನೆಸ್ಟ್ರಿಯಲ್ಲಿ ತರಬೇತಿ ಪಡೆದಿದ್ದರು. ಆ ನಂತರ ತಮ್ಮ ಅಜ್ಜಿಯ ಅನಾರೋಗ್ಯದಿಂದಾಗಿ ಮಾನೆಸ್ಟ್ರಿಯಿಂದ ಹಿಂದಿರುಗಿದ್ದರು. ಇತ್ತೀಚೆಗೆ ಫುಟ್​ಬಾಲ್​ ತಂಡದ ಸಹಾಯಕ ಕೋಚ್​ ಆಗಿ ಕೆಲಸಕ್ಕೆ ಸೇರಿದ್ದರು.

ಎಕಾಪೊಲ್​ ದಿನವೂ ಸುಮಾರು ಒಂದು ಗಂಟೆ ಧ್ಯಾನ ಮಾಡುತ್ತಿದ್ದ. ಧ್ಯಾನದಿಂದಾಗಿಯೇ ಎಕಾಪೊಲ್​ ಮತ್ತು ಬಾಲಕರು ಶಾಂತವಾಗಿರಲು ಸಾಧ್ಯವಾಯಿತು ಎಂದು ಅವರ ಸಂಬಂಧಿ ಥಾಮ್​ ಚಾಂಥವಾಂಗ್​ ತಿಳಿಸಿದ್ದಾರೆ.

ಧ್ಯಾನದಿಂದ ಖಿನ್ನತೆ, ಆತಂಕ ಮತ್ತು ನೋವನ್ನು ಕಡಿಮೆ ಮಾಡಬಹುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಘಟನೆ ಹಿನ್ನೆಲೆ

ಮ್ಯಾನ್ಮಾರ್ ಗಡಿಯಲ್ಲಿರುವ ಪರ್ವತದ ಕೆಳಗಿನ ಕಿರಿದಾದ ಗುಹೆ ಸ್ಥಳೀಯವಾಗಿ ಪ್ರಮುಖ ಪ್ರವಾಸಿ ತಾಣವಾದ ಥಾಮ್ ಲುಯಾಂಗ್ ಗುಹೆಗೆ ಜೂನ್ 23ರಂದು ಫುಟ್ಬಾಲ್ ಪಂದ್ಯದ ಅಭ್ಯಾಸ ಬಳಿಕ ಬಾಲಕನೊಬ್ಬನ ಜನ್ಮದಿನವನ್ನು ಆಚರಿಸಲು 11ರಿಂದ 16 ವರ್ಷದ 12 ಮಂದಿ ಬಾಲಕರ ತಂಡ ಕೋಚ್ ಜತೆಗೆ ತೆರಳಿತ್ತು.

ಈ ಸಂದರ್ಭ ಧಾರಾಕಾರ ಮಳೆ ಸುರಿದ ಕಾರಣ ಗುಹೆಯೊಳಗೆ ಭಾರಿ ನೀರು ಹರಿದಿತ್ತು. ಅಲ್ಲಿ ಪ್ರವಾಹದಂತ ಪರಿಸ್ಥಿತಿ ಎದುರಾಗುವ ಆತಂಕದಿಂದ ಬಾಲಕರು ಮತ್ತು ಕೋಚ್ ಗುಹೆಯೊಳಗೆ 4.5 ಕಿ.ಮೀ ದೂರ ಕ್ರಮಿಸಿ ಬಂಡೆ ಮೇಲೆ ಆಶ್ರಯ ಪಡೆದಿದ್ದಾರೆ. ಮಕ್ಕಳು ಮನೆಗೆ ವಾಪಸಾಗದ್ದರಿಂದ ಆತಂಕಗೊಂಡ ಪಾಲಕರು ಪೊಲೀಸರಿಗೆ ದೂರು ನೀಡಿದಾಗ ಗುಹೆಯೊಳಗೆ ಸಿಲುಕಿದ್ದು ತಿಳಿದುಬಂದಿತ್ತು.

ಆರೋಗ್ಯ ಸುಧಾರಿಸುತ್ತಿದೆ

ಗುಹೆಯಿಂದ ರಕ್ಷಿಸಲಾಗಿರುವ ಎಲ್ಲಾ 8 ಬಾಲಕರು ಆರೋಗ್ಯದಿಂದಿದ್ದಾರೆ. ಯಾರೂ ಜ್ವರದಿಂದ ಬಳಲುತ್ತಿಲ್ಲ, ಆತಂಕಕ್ಕೆ ಒಳಗಾಗಿಲ್ಲ ಮತ್ತು ಅವರ ಮಾನಸಿಕ ಆರೋಗ್ಯ ಉತ್ತವಾಗಿದೆ ಎಂದು ಥಾಯ್ಲೆಂಡ್​ನ ಆರೋಗ್ಯ ಕಾರ್ಯದರ್ಶಿ ಜೆಸಾಡಾ ಚೊಕೆಡಮ್ರಾಂಗ್ಸುಕ್ ತಿಳಿಸಿದ್ದಾರೆ.

Comments are closed.