ರಾಷ್ಟ್ರೀಯ

ಮಾಡೆಲ್ ಒತ್ತೆಯಾಳಾಗಿರಿಸಿಕೊಂಡ ಭಗ್ನ ಪ್ರೇಮಿ..!

Pinterest LinkedIn Tumblr


ಭೋಪಾಲ್: ಭಗ್ನಪ್ರೇಮಿಯೊಬ್ಬ 30 ವರ್ಷದ ಮಾಡೆಲನ್ನ ಕಳೆದ 12 ಗಂಟೆಗಳಿಂದ ಒತ್ತೆಯಾಳಾಗಿರಿಸಿಕೊಂಡಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. ತಾನು ಆಕೆಯ ಪ್ರೇಮಿ ಎಂದು ಹೇಳಿಕೊಂಡಿರುವ ವ್ಯಕ್ತಿ, ಮದುವೆ ಆಗಿಯೇ ತೀರುತ್ತೇನೆಂದು ಪಟ್ಟುಹಿಡಿದಿದ್ದಾನೆ.

ಸದ್ಯ, ಮನೆಯನ್ನ ಸುತ್ತುವರೆದಿರುವ ಪೊಲೀಸರು ಮಹಿಳೆಯನ್ನ ರಕ್ಷಿಸಲು ಹರಸಾಹಸ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಪೊಲೀಸರ ಯತ್ನ ಫಲ ನೀಡಿಲ್ಲ. ಮಹಿಳೆಯ ರಕ್ಷಣೆಗೆ ಪೊಲೀಸರು ಆಗಂತುಕನ ಜೊತೆ ಮಾತುಕತೆಗೆ ಯತ್ನಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಮಹಿಳೆಯನ್ನ ಕೊಂದೇಬಿಡುವುಯದಾಗಿ ಬೆದರಿಕೆ ಹಾಕುತ್ತಿದ್ದಾನೆ.

ಭಗ್ನಪ್ರೇಮಿಯ ಕೈಗೆ ಸಿಲುಕಿರುವ ಮಹಿಳೆ ರಕ್ತದ ಮಡುವಿನಲ್ಲಿರುವುದನ್ನ ನೋಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ಸಬ್ ಇನ್ಸ್​ಪೆಕ್ಟರ್ ಮೇಲೆ ಹಲ್ಲೆಗೂ ಆರೋಪಿ ಯತ್ನಿಸಿರುವುದು ಬೆಳಕಿಗೆ ಬಂದಿದೆ. ವಿಡಿಯೋ ಕಾಲ್ ಮೂಲಕ ಆರೋಪಿಯು ಪೊಲೀಸರ ಜೊತೆ ಸಂಪರ್ಕ ಸಾಧಿಸಿದ್ದು, ಗಾಯಾಳು ಮಹಿಳೆ ರಕ್ತದ ಮಡುವಿನಲ್ಲಿರುವುದು ಕಂಡುಬಂದಿದೆ. ಪೊಲಿಸರ ಬಳಿ ಫೋನ್ ಚಾರ್ಜರ್ ಮತ್ತು ಸ್ಟ್ಯಾಂಪ್ ಪೇಪರ್​ಗೆ ಬೇಡಿಕೆ ಇಟ್ಟಿದ್ಧಾರೆ. ಸ್ವಇಚ್ಛೆಯಿಂದ ಮದುವೆಯಾಗುತ್ತಿರುವುದಾಗಿ ಮಹಿಳೆಯಿಂದ ಹೇಳಿಕೆ ಬರೆಸಿಕೊಳ್ಳಲು ಆರೋಪಿ ಛಾಪಾ ಕಾಗದ ಕೇಳಿದ್ದಾನೆ ಎಂದು ತಿಳಿದುಬಂದಿದೆ.

ಫ್ಲ್ಯಾಟ್​ನಲ್ಲಿ ನಡೆಯುತ್ತಿದ್ದ ಗದ್ದಲ ಗಮನಿಸಿದ ನೆರೆಯವರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ರೋಹಿತ್ ಮನವೊಲಿಸಲು ಸ್ನೇಹಿತರು ನಡೆಸಿದ ಪ್ರಯತ್ನ ಕೂಡ ಫಲ ನೀಡಿಲ್ಲ.

ಆರೋಪಿಯ ಬೇಡಿಕೆಯಂತೆ, ಸಮಯಕ್ಕೆ ತಕ್ಕಂತೆ ಆಹಾರ, ಸಿಗರೇಟ್ ಮತ್ತು ನೀರನ್ನ ಪೊಲೀಸರು ಸರಬರಾಜು ಮಾಡಿದ್ದಾರೆ. ಮಾಡೆಲ್ ಬೆಡ್ ರೂಮಿನ ಕಿಟಕಿಯ ಗ್ರಿಲ್ ಮೂಲಕ ಬಕೆಟ್​ನಲ್ಲಿ ಆರೋಪಿಗೆ ಆಹಾರ ಪದಾರ್ಥಗಳನ್ನ ಸರಬರಾಜು ಮಾಡಲಾಗುತ್ತಿದೆ. ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಮತ್ತು ವೈದ್ಯರು ಸಹ ಫ್ಲ್ಯಾಟ್​ನ ಹೊರಗಡೆ ಬೀಡು ಬಿಟ್ಟಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ಭೂಪೇಂದ್ರ ಸಿಂಗ್ ಪೊಲೀಸರಿಂದ ಘಟನೆಯ ಮಾಹಿತಿ ಪಡೆದಿದ್ಧಾರೆ.

ನನ್ನ ಮಗಳಿರುವ ಫ್ಲ್ಯಾಟ್​ನಲ್ಲಿ ರೋಹಿತ್ ಇರುವ ಬಗ್ಗೆ ನಮಗೆ ತಿಳಿದುಬಂದಿತ್ತು. ನನ್ನ ಮಗಳನ್ನ ಬಿಟ್ಟು ಬಿಡು, ನಿನಗೆ ನಾವೇನೂ ಮಾಡುವುದಿಲ್ಲ ಎಂದು ಹೇಳಿದರೂ ನನ್ನ ಮಾತು ಕೇಳಲಿಲ್ಲ. ಫೆಬ್ರವರಿಯಲ್ಲೂ ರೋಹಿತ್ ಇದೇ ಯತ್ನ ನಡೆಸಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದೆವು ಎಂದು ನ್ಯೂಸ್ 18ಗೆ ಯುವತಿಯ ತಾಯಿ ತಿಳಿಸಿದ್ದಾರೆ.

Comments are closed.