ರಾಷ್ಟ್ರೀಯ

2019ರ ಚುನಾವಣೆಗೆ ಮುಂಚೆಯೇ ರಾಮ ಮಂದಿರ ನಿರ್ಮಾಣ: ಈ ಬಗ್ಗೆ ಅಮಿತ್ ಶಾ ಹೇಳಿಕೆ ನೀಡಿಲ್ಲ ಎಂದ ಬಿಜೆಪಿ

Pinterest LinkedIn Tumblr

ನವದೆಹಲಿ: 2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದ್ದಾರೆ ಎನ್ನಲಾದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಅಮಿತ್ ಶಾ ಆ ರೀತಿಯ ಹೇಳಿಕೆ ನೀಡಿಯೇ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ನಿನ್ನೆ ಹೈದ್ರಾಬಾದ್ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ, ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಸಭೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದ್ದು, 2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಮಂದಿರ ನಿರ್ಮಾಣ ಆಗುವ ವಿಶ್ವಾಸ ಇರುವುದಾಗಿ ಬಿಜೆಪಿ ಮುಖಂಡ ಎನ್ ಆರ್ ರಾವ್ ಸುದ್ದಿಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದರು.

ಆದರೆ, ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕೆಲ ತಾಸುಗಳ ನಂತರ ಬಿಜೆಪಿ ಸ್ಪಷ್ಟನೆ ನೀಡಿದ್ದು, ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ರಾಮಮಂದಿರ ವಿಚಾರವಾಗಿ ಅಮಿತ್ ಶಾ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಅಜೆಂಡಾದಲ್ಲಿಯೂ ಅಂತಹ ವಿಷಯ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಹೈದ್ರಾಬಾದ್ ನಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ, ಅಮಿತ್ ಶಾ ಸುಪ್ರೀಂಕೋರ್ಟ್ ನಲ್ಲಿ ಇನ್ನೂ ಈ ವಿವಾದ ಬಗೆಹರಿಯದಿರುವಾಗ ಶಾ ತೀರ್ಪು ಬರೆಯಲು ಹೋಗಿದ್ದರಾ ಎಂದು ಪ್ರಶ್ನಿಸಿದ್ದಾರೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನಂತರ ತೀರ್ಪು ಬಂದರೆ ಉತ್ತಮ ಎಂದಿದ್ದಾರೆ.

ಓವೈಸಿ ಟ್ವಿಟರ್ ನಲ್ಲಿ ಸ್ಟೇಟಸ್ ಹಾಕುತ್ತಿದ್ದಂತೆ ಅನೇಕ ಪಕ್ಷಗಳ ನಾಯಕರು ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿದ್ದಾರೆ. ಸುನ್ನಿ ವಕ್ಪ್ ಬೋರ್ಡ್ ಪರ ವಾದಿಸುತ್ತಿರುವ ವಕೀಲ ಕಪಿಲ್ ಸಿಬಲ್, 2019ರ ಚುನಾವಣೆ ನಂತರ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾರೆ.

ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಅವರು ವಕೀಲರಾಗಿ ಆ ರೀತಿ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರಾಗಿ ಅಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಆದರೆ, ಕಬಿಲ್ ಸಿಬಲ್ ಸುಪ್ರೀಂಕೋರ್ಟಿನಲ್ಲಿ ಮಾಡಿದ ವಾದ ಸರಿಯಿಲ್ಲ, ಶೀಘ್ರದಲ್ಲಿಯೇ ಈ ವಿವಾದ ಬಗೆಹರಿಯಬೇಕೆಂದು ಸುನ್ನಿ ವಕ್ಪ್ ಬೋರ್ಡ್ ಸದಸ್ಯ ಹಾಜಿ ಮೆಹಬೂಬ್ ಒತ್ತಾಯಿಸಿದ್ದಾರೆ.

Comments are closed.