ಕರ್ನಾಟಕ

ಭಾರೀ ಮಳೆಗೆ ವರದಾ ನದಿಯಲ್ಲಿ ಕೊಚ್ಚಿ ಹೋದ ಲಾರಿ

Pinterest LinkedIn Tumblr


ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ಹಾವೇರಿ ತಾಲೂಕಿನ ನಾಗನೂರು ಸೇತುವೆ ಬಳಿ ವರದಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಲಾರಿಯೊಂದು ಕೊಚ್ಚಿಹೋಗಿದೆ.

ತೀರ್ಥಹಳ್ಳಿ ತಾಲೂಕಿನಲ್ಲಿ ಗುಡಿಸಲು ಕುಸಿದು ಬಿದ್ದು ಇಬ್ಬರು ಗಾಯಗೊಂಡಿದ್ದಾರೆ.ಗುರುವಾರ ತಡರಾತ್ರಿ ಹಾವೇರಿ ತಾಲೂಕಿನ ನಾಗನೂರು ಸೇತುವೆ ಬಳಿ ತುಂಬಿ ಹರಿಯುತ್ತಿದ್ದ ವರದಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಲಾರಿಯೊಂದು ಕೊಚ್ಚಿಹೋಗಿದ್ದು, ಲಾರಿಯಲ್ಲಿದ್ದ ಬಸವರಾಜ ಸೋಮಣ್ಣನವರ (29) ನಾಪತ್ತೆಯಾಗಿದ್ದಾರೆ.

ಲಕ್ಷ್ಮಣ ದೊಡ್ಡತಳವಾರ ಹಾಗೂ ಗುಡ್ಡಪ್ಪ ಎಂಬುವರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ನದಿಯಲ್ಲಿ ಬಿದ್ದ ಲಾರಿ, ಕಾಣೆಯಾದ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ ಎಂದು ಗ್ರಾಮೀಣ ಠಾಣೆ ಸಿಪಿಐ ಬಾಸು ಚವ್ಹಾಣ ತಿಳಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಶೆಟ್ಟಿಗಳಕೊಪ್ಪ, ಕೊಳಗಿಬೈಲುಗಳಲ್ಲಿ ಗುಡಿಸಲು ಕುಸಿದು ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಾಲಕ ಸುಬ್ರಹ್ಮಣ್ಯ ಹಾಗೂ ಕರಿಯ ಎಂಬುವರು ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಲೆಗಳಿಗೆ ಶನಿವಾರವೂ ರಜೆ ನೀಡಲಾಗಿದೆ. ಆಗುಂಬೆ ಭಾಗದಲ್ಲಿ ಮೊಬೈಲ್‌ ಟವರ್‌ ಸಹ ನಿಷ್ಕ್ರಿಯಗೊಂಡಿದ್ದು, ಈ ಭಾಗದ ಜನ ದೂರ ಸಂಪರ್ಕಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.

ಇದೇ ವೇಳೆ, ಗುರುವಾರ ತಡರಾತ್ರಿ ಉಡುಪಿ – ತೀರ್ಥಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಘಾಟಿ ಮೊದಲ ತಿರುವಿನಲ್ಲಿ ರಸ್ತೆ ಕುಸಿದಿದೆ. ಕೊಪ್ಪ ತಾಲೂಕಿನ ಜಯಪುರ ಬಳಿ ವಿರಾಜಪೇಟೆ- ಬೈಂದೂರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ದಿಢೀರನೆ ಮಣ್ಣು ಕುಸಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಮಧ್ಯೆ, ಮಂಗಳವಾರ ರಾತ್ರಿ ಬೈಕಿನಲ್ಲಿ ಹೋಗುವಾಗ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಲೋಕೇಶನ ಪತ್ತೆಗಾಗಿ ಕಾರ್ಯಾಚರಣೆ ಶುಕ್ರವಾರವೂ ಮುಂದುವರೆದಿದೆ.

ಇದೇ ವೇಳೆ, ಮಡಿಕೇರಿ ಸುಮೀಪ ಮಂಗಳೂರು ರಸ್ತೆಯಲ್ಲಿ ಶುಕ್ರವಾರ ಕುಸಿತ ಸಂಭವಿಸಿದೆ. ಹೆದ್ದಾರಿ ಬಿರುಕು ಬಿಟ್ಟಲ್ಲಿ ಸುಮಾರು 500 ಅಡಿ ಆಳದ ಪ್ರಪಾತವಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಸುಮಾರು 30 ಅಡಿ ಉದ್ದಕ್ಕೆ ರಸ್ತೆ ಬಿರುಕು ಬಿಟ್ಟಿದೆ. ಮಳೆ ಮತ್ತೆ ತೀವ್ರಗೊಂಡರೆ ಮಳೆ ನೀರಿನಿಂದ ರಸ್ತೆ ಸುಲಭವಾಗಿ ಪ್ರಪಾತಕ್ಕೆ ಕುಸಿಯುವ ಸಾಧ್ಯತೆ ಇದೆ.

Comments are closed.