ರಾಷ್ಟ್ರೀಯ

ನೀಲ್‌ಗಾಯ್‌ಗಳ ಸೂಚನೆಯಿಂದ ಪ್ರಾಣ ಉಳಿಸಿಕೊಂಡ 18 ಮಂದಿ

Pinterest LinkedIn Tumblr

ಅಹಮದಾಬಾದ್: ಬೆಳೆದು ನಿಂತ ಪೈರುಗಳನ್ನು ತಿಂದು ಹಾಕಲು ತಂಡೋಪತಂಡವಾಗಿ ಬರುವ ನೀಲ್‌ಗಾಯ್‌ ( ನೀಲಿ ಜಿಂಕೆ) ಗಳೆಂದರೆ ಸೌರಾಷ್ಟ್ರದ ರೈತರ ಪಾಲಿಗೆ ಶತ್ರುಗಳಂತೆ. ಆದರೆ ಅದೇ ಶತ್ರುವೀಗ ಸುಮಾರು 18 ಜನರ ಪಾಲಿಗೆ ರಕ್ಷಕನಾಗಿಬಿಟ್ಟಿದೆ. ಪ್ರವಾಹದಲ್ಲಿ ನೀರು ಪಾಲಾಗಲಿದ್ದ 12 ಜನ ಕಾರ್ಮಿಕರು, ತಲಾ ಮೂವರು ಅರಣ್ಯಾಧಿಕಾರಿಗಳು ಮತ್ತು ಕಾವಲುಗಾರರು ನೀಲ್‌ಗಾಯ್‌ಗಳ ಸೂಚನೆಯಿಂದ ಬದುಕುಳಿದಿದ್ದಾರೆ.

ಹೌದು, ಇದು ವಿಚಿತ್ರವಾದರೂ ಸತ್ಯ. ಶನಿವಾರ ಮಧ್ಯಾಹ್ನ ಕಾರ್ಮಿಕರ ಗುಂಪೊಂದು ಹಂಡ್ಲಾ ವಿದಿ ಹುಲ್ಲುಗಾವಲಿನಲ್ಲಿ ಕೆಲಸ ಮಾಡುತ್ತಿತ್ತು. ಸುಮಾರು 3 ಗಂಟೆಯಷ್ಟೊತ್ತಿಗೆ ಅವರು ನೀಲ್‌ಗಾಯ್‌‌ಗಳ ಅಸಾಮಾನ್ಯ ಚಟುವಟಿಕೆಯನ್ನು ಕಂಡಿದ್ದಾರೆ. ನೀಲ್‌ಗಾಯಗಳೆಲ್ಲ ತಂಡೋಪತಂಡವಾಗಿ ಹುಲ್ಲುಗಾವಲಿನಿಂದ ಕಾಲ್ಕಿತ್ತು ಭದ್ರತಾ ಸಿಬ್ಬಂದಿ ನಿವಾಸದ ಕಡೆ ಓಡಿದವು. ಸಾಮಾನ್ಯವಾಗಿ ಮಾನವ ವಸತಿ ಕಡೆ ಸುಳಿಯದ ಈ ಪ್ರಾಣಿಗಳ ವಿಚಿತ್ರ ವರ್ತನೆ ಅಲ್ಲಿದ್ದವರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟಿಹಾಕಿತು.

ಗುಂಪಿನಲ್ಲಿದ್ದ ಒಬ್ಬರಿಗೆ ಪ್ರಾಣಿಗಳ ಅನಿರೀಕ್ಷಿತ ವರ್ತನೆಯ ಹಿನ್ನೆಲೆ ಅರ್ಥವಾಗಿದ್ದು, ಅಲ್ಲೆ ಹತ್ತಿರದಲ್ಲಿದ್ದ ನದಿಯಲ್ಲಿ ಪ್ರವಾಹ ಬರಬಹುದು ಎಂಬುದನ್ನವರು ಊಹಿಸಿದ್ದಾರೆ. ತಕ್ಷಣ ಅಲ್ಲಿಂದ ಕಾಲ್ಕಿತ್ತ 18 ಜನರ ತಂಡ ಸುರಕ್ಷಿತ ಸ್ಥಳಕ್ಕೆ ಹೋಗಿ ನಿಂತಿತು. ಇದಾದ 3 ಗಂಟೆಯಲ್ಲಿ ನದಿಗೆ ಪ್ರವಾಹ ಬಂದು ಹುಲ್ಲುಗಾವಲಿನಲ್ಲಿ 6 ರಿಂದ 7 ಅಡಿ ನೀರು ತುಂಬಿತು.

Comments are closed.