ಕರಾವಳಿ

ಅಲ್ಪಸಂಖ್ಯಾತರ ನಿಗಮದಿಂದ ಸ್ವ ಉದ್ಯೋಗಕ್ಕಾಗಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ಜುಲೈ 17 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದ.ಕ. ಜಿಲ್ಲೆಯ 2018-19ರ ಸಾಲಿಗೆ ಸ್ವ ಉದ್ಯೋಗಕ್ಕಾಗಿ ವಿವಿಧ ಯೋಜನೆಗಳಲ್ಲಿ ಅಲ್ಪಸಂಖ್ಯಾತ ವರ್ಗಗಳ ಹಾಗೂ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಅರ್ಹ ಫಲಾಪೇಕ್ಷಿ ಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಅರ್ಜಿದಾರರು ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಪಾರ್ಸಿ, ಸಿಖ್ಖರು, ಬೌದ್ಧ) ವರ್ಗಕ್ಕೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರಕ್ಕೆ ರೂ. 81,000/-, ನಗರ ಪರಿಮಿತಿಗೆ ರೂ. 1,03,000/- ಗಳನ್ನು ಮೀರಿರಬಾರದು. (ಅರಿವು ಸಾಲಕ್ಕೆ ಮಾತ್ರ ರೂ. 6,00,000/- ಲಕ್ಷದ ಮಿತಿ ಇರುವುದು).

ಗೃಹಸಾಲದ ಮೇಲಿನ ಬಡ್ಡಿ ರಿಯಾಯಿತಿ ಸಹಾಯಧನ ಯೋಜನೆಯಲ್ಲಿ ವಾರ್ಷಿಕ ಆದಾಯದ ಮಿತಿ ಕ್ರಿಶ್ಚಿಯನ್ ಜನಾಂಗಕ್ಕೆ ರೂ.1,50,000/- ಮೀರಿರಬಾರದು). ವಯಸ್ಸು 18ರಿಂದ 55 ವರ್ಷಗಳ ಒಳಗಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಟ 15 ವರ್ಷ ವಾಸವಿರಬೇಕು. ಪಡಿತರಚೀಟಿ, ವೋಟರ್‍ಐಡಿ, ಆಧಾರ್‍ಕಾರ್ಡ್ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, ಕೊಟೇಶನ್, ಲೈಸನ್ಸ್, 3-ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.

ಎಲ್ಲಾ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಆನ್‍ಲೈನ್ ವೆಬ್‍ಸೈಟ್ : www.kmdc.kar.nic.in/loan/login.aspx  ಅರಿವು ಯೋಜನೆಯ ವೆಬ್‍ಸೈಟ್ : www.kmdc.kar.nic.in/arivu2 ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿ, ಹಾರ್ಡ್ ಕಾಪಿಯನ್ನು ಜಿಲ್ಲಾ ಕಛೇರಿಗೆ ಸಲ್ಲಿಸಲು ಕೊನೆಯ ದಿನ ಆಗಸ್ಟ್ 31 ಆಗಿರುತ್ತದೆ.

ಸ್ವಯಂ ಉದ್ಯೋಗ ಯೋಜನೆ:

ಈ ಯೋಜನೆಯಡಿ ರೂ. 1.00 ಲಕ್ಷದವರೆಗೆ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಾಗಿ ರಾಷ್ಟ್ರೀಕೃತ ಬ್ಯಾಂಕ್ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲಕ್ಕಾಗಿ ನಿಗಮದಿಂದ ಶೇ.50ರ ಅಥವಾ ಗರಿಷ್ಟ ರೂ. 35,000/-ದ ಸಹಾಯಧನ ಸೌಲಭ್ಯ ಹಾಗೆಯೇ ರೂ. 1 ಲಕ್ಷಕ್ಕೆ ಮೇಲ್ಪಟ್ಟು ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಾಗಿ ಪಡೆಯುವ ಸಾಲಕ್ಕಾಗಿ ನಿಗಮದಿಂದ ಶೇ. 33ರ ಅಥವಾ ಗರಿಷ್ಟ ರೂ. 2 ಲಕ್ಷದ ಸಹಾಯಧನ ಸೌಲಭ್ಯ.

ಅರಿವು ಯೋಜನೆ:

ಈ ಯೋಜನೆಯಡಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಎಂ.ಬಿ.ಬಿ.ಎಸ್. ಇಂಜಿನಿಯರಿಂಗ್, ಎಂಬಿ.ಎ., ಎಂ.ಸಿ.ಎ. ಎಂ.ಟೆಕ್, ಪಿ.ಹೆಚ್.ಡಿ. ಡಿಗ್ರಿ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ರೂ. 10 ಸಾವಿರದಿಂದ ರೂ. 75 ಸಾವಿರದವರೆಗೆ ವಿವಿಧ ವ್ಯಾಸಂಗಕ್ಕೆ ಅನುಗುಣವಾಗಿ ನಿಗಮದಿಂದ ಸಾಲ ಸೌಲಭ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ.
ಶ್ರಮಶಕ್ತಿ ಯೋಜನೆ:- ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಾಂಪ್ರದಾಯಕ ಕುಶಲಕರ್ಮಿಗಳಿಗೆ ಮತ್ತು ಕುಲಕಸುಬುದಾರರಿಗೆ ಅವರ ವೃತ್ತಿ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಗರಿಷ್ಟ ರೂ. 50,000/- ವರೆಗೆ ಶೇ. 4ರ ಬಡ್ಡಿದರದಲ್ಲಿ ಸಾಲ ಸೌಲಭ್ಯ. ಇದರಲ್ಲಿ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುವ ಅರ್ಜಿದಾರರಿಗೆ ಶೇ. 50ರ ಬ್ಯಾಕ್ ಎಂಡ್ ಸಹಾಯಧನ ಸಿಗುತ್ತದೆ.

ಕಿರುಸಾಲ ಯೋಜನೆ:

ಅಲ್ಪಸಂಖ್ಯಾತರು ನಡೆಸುತ್ತಿರುವ ಮತ್ತು ಲಾಭದಾಯಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗಾಗಿ ಪ್ರತೀ ಸದಸ್ಯರಿಗೆ ಶೇ 4ರ ಬಡ್ಡಿ ದರದಲ್ಲಿ ರೂ. 10,000/-ರ ಸಾಲ ಸೌಲಭ್ಯ ಇದರಲ್ಲಿ ಶೇ. 50 ಸಹಾಯಧನವಾಗಿದೆ.

ಗಂಗಾಕಲ್ಯಾಣ ಯೋಜನೆ:

ಈ ಯೋಜನೆಯಲ್ಲಿ ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತೀ ಸಣ್ಣ ರೈತರಾಗಿರುವ ಒಂದೇ ಕಡೆ ಕನಿಷ್ಠ 1 ಎಕ್ರೆ ಜಮೀನಿರುವ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ. ಈ ಯೋಜನೆಯ ಘಟಕ ವೆಚ್ಚ ಗರಿಷ್ಠ ರೂ. 1.50ಲಕ್ಷ ಆಗಿದ್ದು, ಒಂದು ಕೊಳವೆಬಾವಿ ಕೊರೆಸುವಿಕೆ, ಅಥವಾ ತೆರೆದಬಾವಿ ತೆಗೆದು ಪಂಪ್‍ಸೆಟ್ ಹಾಗೂ ಪೈಪ್‍ಲೈನ್ ಆಳವಡಿಸುವಿಕೆ ಒಳಗೊಂಡಿರುತ್ತದೆ.
ಕ್ರೈಸ್ತ ಸಮುದಾಯದವರಿಗಾಗಿ ನಿವೇಶನ ಖರೀದಿ/ಗೃಹ ನಿರ್ಮಾಣ ಸಾಲ ಮೇಲಿನ ಬಡ್ಡಿ ಸಹಾಯಧನ ಯೋಜನೆ:- ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಇತರೇ ಅಂಗೀಕೃತ ಹಣಕಾಸು ಸಂಸ್ಥೆಗಳಿಂದ ಗರಿಷ್ಟ 5ಲಕ್ಷ ರೂಪಾಯಿಗಳ ಮತ್ತು ಅದಕ್ಕಿಂತ ಕಡಿಮೆ ಪಡೆದ ಗೃಹ ಸಾಲಕ್ಕೆ ಗರಿಷ್ಟ1ಲಕ್ಷ ರೂಪಾಯಿಗಳಿಗೆ ಮೀರದಂತೆ ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಬಡ್ಡಿಯಲ್ಲಿರಿಯಾಯತಿ ಸಹಾಯಧನ ಸೌಲಭ್ಯ.

ಪಶು ಸಂಗೋಪನಾ ಯೋಜನೆ :

ಹಸು, ಕುರಿ, ಮೇಕೆ ಮುಂತಾದ ಸಾಕು ಪ್ರಾಣಿಗಳನ್ನು ಖರಿದಿಸಲು ಮತ್ತು ಕೋಳಿ ಸಾಕಾಣಿಕೆಗಾಗಿ ಅಲ್ಪಸಂಖ್ಯಾತ ಗ್ರಾಮೀಣ ಮಹಿಳೆಯಡಿಗೆ ಮಾತ್ರ ಶೇ. 3ರ ಬಡ್ಡಿ ದರಲ್ಲಿ ರೂ. 40,000/- ದ ಸಾಲ ಸೌಲಭ್ಯ. ಇದರಲ್ಲಿ ಶೇ. 50ರಷ್ಟು ಸಹಾಯಧನವಾಗಿರುತ್ತದೆ.
ಟ್ಯಾಕ್ಸಿ/ಸರಕು ಸಾಗಣೆ ವಾಹನ ಖರೀದಿ ಯೋಜನೆ: ಈ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆಯುವ ಸಾಲಕ್ಕೆ ನಿಗಮದಿಂದ ರೂ. 3.00 ಲಕ್ಷಗಳ ಸಹಾಯಧನ ಸೌಲಭ್ಯ.

ಪ್ರವಾಸಿ ಸ್ವಯಂ ಉದ್ಯೋಗ ಯೋಜನೆ:

ಕೊಲ್ಲಿ ರಾಷ್ಟ್ರಗಳಿಂದ ಉದ್ಯೋಗಾವಕಾಶ ವಂಚಿತರಾಗಿ ಮತ್ತು ಅಂತಿಮವಾಗಿ ಹಿಂದಿರುಗಿದ ಅಲ್ಪಸಂಖ್ಯಾತರ ಸಮುದಾಯಗಳ ನಿರುದ್ಯೋಗಿಗಳಿಗೆ ಸ್ವಯಂ-ಉದ್ಯೋಗಕ್ಕಾಗಿ ಶೇ. 5ರ ಬಡ್ಡಿ ದರದಲ್ಲಿ ರೂ. 10 ಲಕ್ಷದವರೆಗೆ ಅವಧಿ ಸಾಲ ಸೌಲಭ್ಯ

ಕೃಷಿ ಯಂತ್ರೋಪಕರಣ ಖರೀದಿ ಯೋಜನೆ:

ಅಲ್ಪಸಂಖ್ಯಾತರ ಸಮುದಾಯಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಟಿಲ್ಲರ್, ಉಕ್ಕಿನ ನೇಗಿಲು, ಡ್ರಿಲ್ಸ್, ಕಳೆ ಕೀಳುವ ಯಂತ್ರ, ಪಂಪ್‍ಸೆಟ್, ಟ್ರಾಕ್ಟರ್, ಮುಂತಾದ ನೂತನ ಕೃಷಿ ಸಲಕರಣಿಗಳನ್ನು ಶೇ.50 ರಷ್ಟು ಸಹಾಯಧನ ಸೇರಿ ಗರಿಷ್ಟ 1 ಲಕ್ಷ ರೂ. ಘಟಕ ವೆಚ್ಚದಲ್ಲಿ ನೀಡಲಾಗುವುದು.

‘ಮನೆ ಮಳಿಗೆ’ ಯೋಜನೆ:

ಈ ಯೋಜನೆಯಡಿ ಕೋಮು ಗಲಭೆ/ಕೋಮು ಹಿಂಸಾಚಾರ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪದಿಂದ ಮನೆ, ವ್ಯಾಪಾರ ಸ್ಥಳ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ಸನ್ನಡತೆ ಆಧಾರದ ಮೇಲೆ ಕಾರಾಗೃಹ ವಾಸದಿಂದ ಬಿಡುಗಡೆಯಾದ ಅಲ್ಪಸಂಖ್ಯಾತ ಖೈದಿಗಳಿಗೆ, ಭಯೋತ್ಪಾದಕ ವಿರೋದಿ ಚಟುವಟಿಕೆ, ಗೂಂಡಾ ಕಾಯಿದೆಯಡಿ ಬಂದಿತರಾಗಿ ಪ್ರಕರಣಗಳು ಸಾಬೀತಾಗದೆ ನ್ಯಾಯಾಲಯದಿಂದ ಬಿಡುಗಡೆಯಾದ ಅಲ್ಪಸಂಖ್ಯಾತರ ನಿರಪರಾದಿಗಳಿಗೆ ಹಾಗೂ ವಿವಿಧ ಸುರಕ್ಷಿತ ಕಾಯಿದೆಯಡಿ ಬಂಧಿತರಾಗಿ ಹಲವಾರು ವರ್ಷಗಳ ನಂತರ ನ್ಯಾಯಾಲಯದಿಂದ ಬಿಡುಗಡೆಗೊಂಡ ಅಲ್ಪಸಂಖ್ಯಾತರ ನಿರಪರಾದಿಗಳಿಗೆ ಪುನರ್ವಸತಿಗಾಗಿ ಶೇ. 3ರ ಬಡ್ಡಿ ದರದಲ್ಲಿ ರೂ. 5 ಲಕ್ಷಗಳ ಸಾಲ ಸೌಲಭ್ಯ ಇದರಲ್ಲಿ ಶೇ. 50ರಷ್ಟು ಸಹಾಯಧನವಾಗಿರುತ್ತದೆ.

ಅಟೋಮೊಬೈಲ್ ಉದ್ಯಮಕ್ಕಾಗಿ ನಿಗಮದಿಂದ ರೂ. 2 ಲಕ್ಷದಿಂದ ರೂ. 5 ಲಕ್ಷದವರೆಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಇದರಲ್ಲಿ ರೂ. 70,000/- ದಿಂದ ಗರಿಷ್ಟ ರೂ. 1,25 ಲಕ್ಷದವರೆಗೆ ಸಹಾಯಧನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಝಾದ್ ಅಲ್ಪಸಂಖ್ಯಾತರ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು, ಕಛೇರಿ ದೂರವಾಣಿ ಸಂಖ್ಯೆ 0824 – 2429044 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Comments are closed.