ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸುಳ್ಯದ ಸಂಪಾಜೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಎಸ್ ಐಟಿ ಅಧಿಕಾರಿಗಳು

Pinterest LinkedIn Tumblr

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳ್ಸಿರುವ ಎಸ್ ಐಟಿ ಅಧಿಕಾರಿಗಳು ಮತ್ತೋರ್ವ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಮುಂಡಡ್ಕ ನಿವಾಸಿ ಮೋಹನ್ ನಾಯಕ್(30 ವರ್ಷ) ಎಂಬಾತನನ್ನು ತನಿಖಾ ತಂಡ(ಎಸ್‌ಐಟಿ) ಬಂಧಿಸಿದೆ ಎಂದು ತಿಳಿದುಬಂದಿದೆ. ಎರಡು ದಿನಗಳ ಹಿಂದೆಯೇ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮೋಹನ್ ನಾಯಕ್‌ನನ್ನು ಜುಲೈ 19ರಂದು ಮುಂಜಾನೆ 2 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಬಂದ ಎಸ್ಐಟಿ. ಪೊಲೀಸರು ಸಂಪಾಜೆಯ ಮುಂಡಡ್ಕದಿಂದ ಬಂಧಿಸಿ ಕರೆದೊಯ್ದಿದ್ದರು. ಬಂಧಿತನನ್ನು ಗುರುವಾರ ಸಂಜೆ ಬೆಂಗಳೂರು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿದೆ ಎಂದು ಎಸ್‌ಐಟಿ ತನಿಖಾಧಿಕಾರಿ ಎಂ.ಎನ್.ಅನುಚೇತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಡಿಕೇರಿ ಸಮೀಪದ ಕುಶಾಲನಗರದಲ್ಲಿ ನಾಟಿವೈದ್ಯನಾಗಿ ಗುರುತಿಸಿಕೊಂಡಿದ್ದ ಮೋಹನ್ ನಾಯಕ್‌ ನನ್ನು ಗೌರಿ ಹತ್ಯೆ ಆರೋಪಿಗಳಿಗೆ ಗನ್ ಒದಗಿಸಿದ ಹಾಗೂ ಹತ್ಯೆ ವೇಳೆ ಬೈಕ್ ಚಲಾಯಿಸಿದ ಆರೋಪದಲ್ಲಿ ಬಂಧಿಸಿರುವುದಾಗಿ ಎಂ.ಎನ್.ಅನುಚೇತ್ ಸ್ಪಷ್ಟಪಡಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಗೆ ಮುನ್ನ ಶಂಕಿತ ಶೂಟರ್ ಪರಶುರಾಮ ವಾಗ್ಮೋರೆಗೆ 7.65 ಎಂ.ಎಂ. ಗನ್ ಒದಗಿಸಿ ಶೂಟೌಟ್ ಬಳಿಕ ಬೈಕ್ ಚಲಾಯಿಸಿದ ಆರೋಪವನ್ನು ಮೋಹನ್ ನಾಯಕ್ ಎದುರಿಸುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಪರಶುರಾಮ ವಾಗ್ಮೋರೆ ಸೇರಿದಂತೆ ಒಟ್ಟು ಆರು ಮಂದಿಯನ್ನು ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಕುಶಾಲ ನಗರದಲ್ಲಿ ನಾಟಿ ವೈದ್ಯನಾಗಿ ಗುರುತಿಸಿಕೊಂಡಿದ್ದ ಮೋಹನ್ ನಾಯಕ್ ನನ್ನು ಭೇಟಿ ಮಾಡಲು ಆಗಾಗ ಕಾರುಗಳಲ್ಲಿ ಹೊರಗಿನಿಂದ ಜನರು ಬರುತ್ತಿದ್ದರೆನ್ನಲಾಗಿದೆ. ಆದರೆ ಮದ್ದಿಗೆ ಜನರು ಬರುತ್ತಿರಬಹುದೆಂದು ಸ್ಥಳೀಯರು ಭಾವಿಸಿದ್ದರು. ಅಲ್ಲದೇ ಈತ ಆಗಾಗ ಬೆಂಗಳೂರಿಗೆಂದು ಹೇಳಿ ಹೋಗುತ್ತಿದ್ದನೆ ಎನ್ನಲಾಗಿದೆ.

Comments are closed.