ಕರಾವಳಿ

ಶೀರೂರು ಶ್ರೀ ಪ್ರಕರಣ ನಿಸ್ಪಕ್ಷಪಾತ ತನಿಖೆಯಾಗಲಿ: ಎಸ್ಪಿಗೆ ಮನವಿ ನೀಡಿದ ಕೇಮಾರು ಶ್ರೀ, ವಜ್ರದೇಹಿ ಶ್ರೀ

Pinterest LinkedIn Tumblr

ಉಡುಪಿ: ಶಿರೂರು ಸ್ವಾಮೀಜಿಯ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರಾವಳಿಯ ಸಂತರ ಪರವಾಗಿ ಕೇಮಾರು ಮಠದ ಶ್ರೀಈಶ ವಿಠಲ ಸ್ವಾಮೀಜಿ ಹಾಗೂ ವಜ್ರದೇಹಿ ಶ್ರೀರಾಜಶೇಖರಾನಂದ ಸ್ವಾಮೀಜಿ ಇಂದು ಉಡುಪಿ ಎಸ್ಪಿ ಕಚೇರಿಗೆ ಆಗಮಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇಮಾರು ಸ್ವಾಮೀಜಿ, ಎಸ್ಪಿಗೆ ಈ ಪ್ರಕರಣದ ಬಗ್ಗೆ ಮೌಖಿಕವಾಗಿ ಮನವಿ ಮಾಡಿದ್ದೇವೆ. ಈ ಪ್ರಕರಣದ ಹಿಂದೆ ಹೆಣ್ಣಾಗಲಿ, ಗಂಡಾಗಲಿ ಯಾರೇ ಇದ್ದರೂ ನಿಷ್ಪಕ್ಷಪಾತ ತನಿಖೆ ಮಾಡ ಬೇಕೆಂದು ಒತ್ತಾಯಿಸಿದ್ದೇವೆ. ಅದಕ್ಕೆ ಎಸ್ಪಿಯವರು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು.

ಆರೋಪಿಗಳು ತಪ್ಪಿಸಿಕೊಳ್ಳದಂತೆ ಪ್ರಕರಣವನ್ನು ಬಲಿಷ್ಠಗೊಳಿಸಲು ಹೊಸದಾಗಿ ದೂರು ಬೇಕಾದರೆ ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಎಸ್ಪಿಯವರು ಬೇಡ ಎಂದು ಹೇಳಿದ್ದಾರೆ. ಎಫ್‌ಎಸ್‌ಎಲ್ ಮತ್ತು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ವಾಮೀಜಿ ವಿಷದಿಂದ ಸತ್ತಿದ್ದಾರೆ ಎಂಬುದು ದೃಢಪಟ್ಟರೆ ಪ್ರಕರಣವು ತನ್ನಿಂದ ತಾನೆ ವರ್ಗಾವಣೆಯಾಗುತ್ತದೆ. ಆಗ ನಾವು ಮರು ಹೇಳಿಕೆಗಳನ್ನು ಪಡೆದುಕೊಳ್ಳುತ್ತೇವೆ ಎಂಬುದಾಗಿ ಎಸ್ಪಿ ತಿಳಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಈಗ ಸ್ವಾಮೀಜಿಯ ಬ್ರಹ್ಮಚರ್ಯ ಹಾಗೂ ಅವರ ನಡತೆಯನ್ನು ಪ್ರಶ್ನಿಸುವ ಸಂದರ್ಭ ಅಲ್ಲ. ಯಾಕೆಂದರೆ ಅವರು ವಿಧಿವಶರಾಗಿದ್ದಾರೆ. ಸತ್ತ ನಂತರ ಅಪಪ್ರಚಾರ ಮಾಡುವುದು ಯಾವುದೇ ವ್ಯಕ್ತಿಗೂ ಭೂಷಣ ಅಲ್ಲ. ಈಗ ಬೇಕಾಗಿರುವುದು ಸ್ವಾಮೀಜಿ ಸೇವಿಸಿದ ಆಹಾರದಲ್ಲಿ ಹೇಗೆ ವಿಷ ಸೇರಿಕೊಂಡಿದೆ ಎಂಬುದು. ಅದಕ್ಕೆ ನ್ಯಾಯ ಸಿಗಬೇಕು. ಅಪಪ್ರಚಾರದಿಂದ ತನಿಖೆಯ ಹಾದಿ ತಪ್ಪಬಾರದು. ಅದನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಎಸ್ಪಿಗೆ ಮನವಿ ಮಾಡಲಾಗಿದೆ. ನಮಗೆ ಸರಿಯಾದ ತನಿಖೆ ಆಗಬೇಕು ಎಂದು ಕೇಮಾರು ಸ್ವಾಮೀಜಿ ತಿಳಿಸಿದರು.

ಅಷ್ಟ ಮಠಾಧೀಶರ ಬಗ್ಗೆ ನಾವು ಯಾವುದೇ ಮಾಧ್ಯಮದಲ್ಲಿ ಆರೋಪವೂ ಮಾಡಿಲ್ಲ, ಅವರ ಬಗ್ಗೆ ಕೀಳಾಗಿಯೂ ಮಾತನಾಡಿಲ್ಲ. ಅವರ ಬಗ್ಗೆ ನಮಗೆ ಗೌರವ ಇದೆ. ಸತ್ತ ನಂತರ ನೂನ್ಯತೆಗಳ ಬಗ್ಗೆ ಮಾತನಾಡುವುದು ಬೇಡ ಎಂದು ಪೇಜಾವರ ಸ್ವಾಮೀಜಿಯ ಶಿಷ್ಯನಾಗಿ ನಾನು ಅವರೊಂದಿಗೆ ಮನವಿ ಮಾಡುತ್ತಿದ್ದೇನೆ. ಹಿಂದು ಯುವಕರು ಸತ್ತಾಗ, ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿರುವ ಸ್ವಾಮೀಜಿ, ಶಿರೂರು ಸ್ವಾಮೀಜಿ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಬೇಕು. ಮಠದ ಅಂಗಳದಲ್ಲಿ ಒಬ್ಬ ವ್ಯಕ್ತಿಗೆ ಆಗಿರುವ ಅನ್ಯಾಯಕ್ಕೆ ಎಲ್ಲರು ಒಟ್ಟಾಗಿ ನ್ಯಾಯ ಕೊಡಬೇಕು. ಅದಕ್ಕೆ ಎಲ್ಲ ಮಠಾಧಿಪತಿಗಳು ಕೈಜೋಡಿಸಬೇಕು ಎಂದು ಅವರು ಒತ್ತಾಯಿಸಿದರು.

ವಜ್ರದೇಹಿ ಶ್ರೀರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಶಿರೂರು ಸ್ವಾಮೀಜಿ ಸಾವಿನ ಸಂಶಯದ ನಿವಾರಣೆಗಾಗಿ ಎಸ್ಪಿ ಭೇಟಿ ಮಾಡಿದ್ದೇವೆ. ಕಾನೂನು ಸರಿಯಾದ ದಿಕ್ಕಿನಲ್ಲಿ ಸಾಗಬೇಕು. ಆರೋಪಿಗಳ ಪತ್ತೆ ಇಲಾಖೆ ತನಿಖೆಯಿಂದ ಮಾತ್ರ ಸಾಧ್ಯ. ನಮ್ಮ ಮನವಿಗೆ ಎಸ್ಪಿ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣದ ಸತ್ಯಾಸತ್ಯತೆ ನಿಷ್ಪಕ್ಷಪಾತ ವಾಗಿ ಸಮಾಜದ ಮುಂದೆ ಬರಬೇಕೆಂಬ ದೃಷ್ಠಿಯಿಂದ ಈ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಬೇಕಾದ ಪ್ರತಿಫಲ ನಮಗೆ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

.

Comments are closed.