ಕರ್ನಾಟಕ

ಕುಮಾರಸ್ವಾಮಿಯವರನ್ನು ಮುಕ್ತಗೊಳಿಸಿ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ಸಿದ್ದತೆ!

Pinterest LinkedIn Tumblr


ಬೆಂಗಳೂರು : ಪಕ್ಷದ ರಾಜ್ಯಾಧ್ಯಕ್ಷ ಜವಾಬ್ದಾರಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಕ್ತಗೊಳಿಸಿ ಸರ್ಕಾರದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಬಲ ನೀಡಲು ಜೆಡಿಎಸ್ ಗಂಭೀರವಾಗಿ ಚಿಂತನೆ ನಡೆಸಿದೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸಲಾಯಿತು. ಕುಮಾರಸ್ವಾಮಿ ಅವರ ರಾಜ್ಯಾಧ್ಯಕ್ಷ ಹುದ್ದೆಗೆ ವಿಶ್ವನಾಥ್ ಅವರ ಹೆಸರು ಮುಂಚೂಣಿಯಲ್ಲಿದ್ದು ಅವರೇ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ಇದರ ಜತೆಗೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಮಧು ಬಂಗಾರಪ್ಪ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ವೈ. ಎಸ್.ವಿ.ದತ್ತ ಅವರ ಹೆಸರು ಸಹ ಕೇಳಿ ಬಂದಿದೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಜತೆಗೆ ಮುಖ್ಯಮಂತ್ರಿ ಸ್ಥಾನವನ್ನು ನಿಭಾಯಿಸುವುದು ಕುಮಾರಸ್ವಾಮಿ ಅವರಿಗೆ ಕಷ್ಟವಾಗುವ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಚಿಂತನೆ ನಡೆಸಿದ್ದಾರೆ. ಆದರೆ, ಪಕ್ಷದ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದು ಪಕ್ಷದ ವರಿಷ್ಠರ ಅವಗಾಹನೆಗೆ ಬಿಟ್ಟದ್ದು ಎಂದು ಹೇಳಿದ ನಾಯಕರು, ದೇವೇಗೌಡರ ಹೆಗಲಿಗೆ ಬಿಟ್ಟಿದ್ದಾರೆ. ದೇವೇಗೌಡರ ವಿವೇಚನೆಯೇ ಅಂತಿಮ ನಿರ್ಧಾರ ಎಂದು ಗೊತ್ತಾಗಿದೆ. ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸುವ ಕುರಿತು ಸಹ ಚರ್ಚಿಸಲಾಯಿತು. ಇನ್ನು ಮುಂದಿನ ಲೋಕಸಭೆ ಮತ್ತು ಸ್ಥಳೀಯ ಚುನಾವಣೆಗೆ ಸಿದ್ಧತೆ ಕೈಗೊಂಡು ಪ್ರಚಾರದಲ್ಲಿ ತೊಡಗುವಂತೆ ಸೂಚನೆ ನೀಡಲಾಯಿತು. ಸರ್ಕಾರ ಕೈಗೊಂಡಿರುವ ಸಾಲಮನ್ನಾ ಸೇರಿದಂತೆ ಇತರೆ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪಕ್ಷದ ಮುಖಂಡರು ಕಾರ್ಯಕತರು ಮುಂದಾಗಬೇಕು. ರಾಜ್ಯದೆಲ್ಲೆಡೆ ಪ್ರವಾಸ ಕೈಗೊಳ್ಳಬೇಕು ಎಂದು ದೇವೇಗೌಡರು ಸೂಚಿಸಿದರು ಎಂದು ಹೇಳಲಾಗಿದೆ. ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳ ನೇಮಕಕ್ಕೆ ಸಮಿತಿ ರಚನೆ, ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಿಗೆ ವೀಕ್ಷಕರ ನೇಮಕ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಸಂಘಟನೆ: ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೊಳಿಸಲು ತೀರ್ಮಾ ನಿಸಲಾಗಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳಹುಡುಕಾಟ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಾಂಗ್ರೆಸ್ ಜತೆಗೆ ಕೈ ಜೋಡಿಸಿದರೆ ಯಾವ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದರ ಚಿಂತನೆ ನಡೆಸುವಂತೆ ಸೂಚಿಸಲಾಗಿದೆ. ಎಷ್ಟು ಸ್ಥಾನ ಬಿಟ್ಟುಕೊಡಬೇಕು ಎಂಬುದು ಕಾಂಗ್ರೆಸ್ ಜತೆಗೆ ಇನ್ನೂ ಚರ್ಚೆಯಾಗದ ಕಾರಣ ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸುವಂತೆ ತಿಳಿಸಲಾಗಿದೆ. ಈ ಬಗ್ಗೆ ಮುಂದಿನ ತಿಂಗಳುರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Comments are closed.