ಕರ್ನಾಟಕ

ತಬ್ಬಲಿಯಾದ ಅನಾಥ ಮಕ್ಕಳ ಆದಾಯ ಸುರಕ್ಷಿತ ಯೋಜನೆಗೆ ಹಣ ಬಿಡುಗಡೆ!

Pinterest LinkedIn Tumblr


ಬೆಂಗಳೂರು: ಅನಾಥ ಹಾಗೂ ನಿರ್ಗತಿಕ ಮಕ್ಕಳ ಬದುಕಿಗೊಂದು ಆಧಾರ ನೀಡಲು ಸರ್ಕಾರ ಜಾರಿಗೆ ತಂದಿದ್ದ “ಆದಾಯ ಸುರಕ್ಷಿತ ಯೋಜನೆ’ ಈಗ ಅಕ್ಷರಶಃ ತಬ್ಬಲಿಯಾಗಿದೆ.

ಸರ್ಕಾರಿ ಬಾಲಮಂದಿರಗಳಲ್ಲಿ ದೀರ್ಘಾವಧಿ ಪುನರ್ವಸತಿ ಪಡೆದಿರುವ ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಜೀವನಾಧಾರ ಭದ್ರತೆ ಖಾತರಿಗೊಳಿಸಲು ಜಾರಿಗೆ ತರಲಾದ ಈ ಯೋಜನೆಯನ್ನು 4 ವರ್ಷಗಳಿಂದ ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಯೋಜನೆ ಜಾರಿಯಾಗದೆ ಇರುವುದರಿಂದ ಇದಕ್ಕೆ ಮೀಸಲಿಟ್ಟ 4 ಕೋಟಿ ರೂ.ಹಣ ಖಜಾನೆಯಲ್ಲಿ ಕೊಳೆಯುತ್ತಿದ್ದರೆ,ಯೋಜನೆ ಅನುಷ್ಠಾನಗೊಂಡು ತಮ್ಮ ಬದುಕಿಗೊಂದು ಆಧಾರ ಸಿಗಲಿದೆ ಎಂದು 400ಕ್ಕೂ ಹೆಚ್ಚು ಅನಾಥ ಮತ್ತು ನಿರ್ಗತಿಕ ಮಕ್ಕಳು ಕಾದು ಕುಳಿತಿದ್ದಾರೆ.

ಬಾಲ ನ್ಯಾಯ ಕಾಯ್ದೆಯಡಿ ನಡೆಯುತ್ತಿರುವ ಸರ್ಕಾರಿ ಬಾಲ ಮಂದಿರಗಳಲ್ಲಿ ದೀರ್ಘ‌ಕಾಲದ ಪುನರ್ವಸತಿಗಾಗಿ ಇರುವ ಅನಾಥ ಮತ್ತು ನಿರ್ಗತಿಕ ಮಕ್ಕಳ ಜೀವನಾಧಾರ ಭದ್ರತೆಗೆ ವಿಮೆ ಸೌಲಭ್ಯ ಒದಗಿಸಲು ಈ ಯೋಜನೆ ಜಾರಿಗೆ ತರಲು ಉದ್ದೇಶಿಸಿದ್ದ ರಾಜ್ಯ ಸರ್ಕಾರ 2014-15ನೇ ಸಾಲಿನ ಬಜೆಟ್‌ನಲ್ಲಿ ಇದನ್ನು ಘೋಷಣೆ ಮಾಡಿತ್ತು. ಅಷ್ಟೇ ಅಲ್ಲ, ಆ ವರ್ಷ ಇದಕ್ಕಾಗಿ 2.50 ಕೋಟಿ ರೂ.ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿತ್ತು.

ಯೋಜನೆಯ ಅನುಷ್ಠಾನದ ಹೊಣೆಯನ್ನು ರಾಜ್ಯ ಸಮಗ್ರ ಮಕ್ಕಳ ಸಂರಕ್ಷಣಾ ಸಂಘಕ್ಕೆ ನೀಡಲಾಗಿತ್ತು.ಆದರೆ, ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು ಬಿಟ್ಟರೆ, ಈ ಯೋಜನೆ ಮುಂದಕ್ಕೆ ಹೋಗಿಲ್ಲ.ಯೋಜನೆಗೆ ಮಾರ್ಗಸೂಚಿ ರೂಪಿಸಿ, ಕ್ರಿಯಾ ಯೋಜನೆ ಸಿದ್ಧಪಡಿಸಿ ಹಣಕಾಸಿನ ಒಪ್ಪಿಗೆ ಪಡೆಯದ ಕಾರಣ ಹಾಗೂ ಯೋಜನಾ ಇಲಾಖೆಯ ಅನುಮೋದನೆ ಸಿಗದಿರುವುದರಿಂದ 2014-15ನೇ ಹಣಕಾಸು ವರ್ಷದಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಅನುಷ್ಠಾನಗೊಳ್ಳದ ಈ ಯೋಜನೆಗೆ 2015-16ರ ಬಜೆಟ್‌ಲ್ಲಿ 50 ಲಕ್ಷ, 2016-17ರಲ್ಲಿ 24 ಲಕ್ಷ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ, ಒಂದು ನಯಾ ಪೈಸೆಯೂ ಖರ್ಚು ಆಗಿಲ್ಲ. ಆಶ್ಚರ್ಯವೆಂದರೆ 2014-15ರಲ್ಲಿ ಘೋಷಣೆಯಾದ ಯೋಜನೆಗೆ 2016ರ ಮೇನಲ್ಲಿ ಹಣಕಾಸಿನ ಒಪ್ಪಿಗೆ ಪಡೆದುಕೊಳ್ಳಲಾಗಿದೆ.

ಈ ಮಧ್ಯೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಲ್ಲಿಸಿದ್ದ ಕರಡು ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆ ತರುವಂತೆ
ಯೋಜನಾ ಇಲಾಖೆ ಸಲಹೆ ನೀಡಿತ್ತು. 2017ರ ಏಪ್ರಿಲ್‌ನಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಸಲ್ಲಿಸಲಾಯಿತು. ಇದರಿಂದಾಗಿ ಯೋಜನೆ ಮತ್ತಷ್ಟು ನನೆಗುದಿಗೆ ಬಿತ್ತು.

ಇಲಾಖೆಯೇ ಹೊಣೆ
ಯೋಜನೆ ನನೆಗುದಿಗೆ ಬೀಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಹೊಣೆ. ಏಕೆಂದರೆ, 2015-15ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಘೋಷಣೆಯಾಗಿದ್ದರೂ, ಎಂಟು ತಿಂಗಳ ಬಳಿಕ ಅಂದರೆ 2014ರ ನವೆಂಬರ್‌ನಲ್ಲಿ ಕರಡು ಮಾರ್ಗ ಸೂಚಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು. ಜೊತೆಗೆ, 2 ವರ್ಷದವರೆಗೂ ಇದಕ್ಕೆ ಆರ್ಥಿಕ ಒಪ್ಪಿಗೆ ಮತ್ತು ಯೋಜನಾ ಇಲಾಖೆಯ ಅನುಮೋದನೆ ಪಡೆದುಕೊಂಡಿಲ್ಲ. 2016ರಲ್ಲಿ ಹಣಕಾಸಿನ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಇದೀಗ 2018ರ ಆರಂಭದಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊಣೆಗೇಡಿತನದಿಂದ ಯೋಜನೆ ಅನಾಥವಾಗಿದೆ.

ಯೋಜನೆ ಜಾರಿಗೆ ಇತ್ತೀಚಿಗಷ್ಟೇ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ವರ್ಷದಿಂದ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು.
– ನರ್ಮದಾ ಆನಂದ್‌, ನಿರ್ದೇಶಕಿ,ಸಮಗ್ರ ಶಿಶು ಸಂರಕ್ಷಣಾ ಯೋಜನೆ

ಯಾರೂ ದಿಕ್ಕಿಲ್ಲದ ಮತ್ತು ಆಸರೆಯ ಹೆಚ್ಚು ಅವಶ್ಯಕತೆಯಿರುವ ಅನಾಥ ಮತ್ತು ನಿರ್ಗತಿಕ ಮಕ್ಕಳ ಯೋಜನೆ, ಇಷ್ಟೊಂದು ವಿಳಂಬ ವಾಗಿರುವುದು ನೋವಿನ ಸಂಗತಿ. ಸರ್ಕಾರ ಆದ್ಯತೆ ಮೇಲೆ ಈ ಯೋಜನೆ ಅನುಷ್ಠಾನಕ್ಕೆ ಒತ್ತುಕೊಡಬೇಕು.
– ವೈ. ಮರಿಸ್ವಾಮಿ, ಮಕ್ಕಳ ಹಕ್ಕುಗಳ
ರಕ್ಷಣಾ ಆಯೋಗದ ಸದಸ್ಯ

– ರಫೀಕ್‌ ಅಹ್ಮದ್‌

Comments are closed.