ಕರ್ನಾಟಕ

ರೈತಸಂಘದಿಂದ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr


ಬೆಂಗಳೂರು: ರಾಜ್ಯಾದ್ಯಂತ ಶನಿವಾರ ರೈತ ಹುತಾತ್ಮ ದಿನಾಚರಣೆ ಆಚರಿಸಲಾಯಿತು. ಇದೇ ವೇಳೆ, ಬೆಳೆಗಳ ದರ ಕುಸಿತ ಖಂಡಿಸಿ, ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ರಾಜ್ಯದ ವಿವಿಧೆಡೆ ರೈತರು ಪ್ರತಿಭಟನೆ ನಡೆಸಿದರು.

ಗದಗ ಜಿಲ್ಲೆ ನರಗುಂದದಲ್ಲಿ ರೈತ ಹುತಾತ್ಮದಿನಾಚರಣೆ ಪ್ರಯುಕ್ತ ಪಟ್ಟಣದಲ್ಲಿರುವ ದಿ|ಈರಪ್ಪ ಕಡ್ಲಿಕೊಪ್ಪ ಹುತಾತ್ಮ ರೈತನ ವೀರಗಲ್ಲಿಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾಲಾರ್ಪಣೆ ಮಾಡಿದರು.

ಬಳಿಕ, ಮಹದಾಯಿ ಹೋರಾಟ ವೇದಿಕೆಗೆ ತೆರಳಿ 1102ನೇ ದಿನದ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದರು. ಜೀವ ಜಲಕ್ಕಾಗಿ 3 ವರ್ಷದಿಂದ ಹೋರಾಟ ಮಾಡಿ ಬೇಸತ್ತಿರುವ ಈ ಭಾಗದ ಜನರ ಕಣ್ಣೀರಿಗೆ ಪ್ರತೀಕವಾಗಿ ದಯಾಮರಣ ಪತ್ರ ಚಳವಳಿ ನಡೆದಿದೆ. ರಾಷ್ಟ್ರಪತಿಗಳುಇದನ್ನು ಗಂಭೀರವಾಗಿ ಪರಿಗಣಿಸಿ ಮಧ್ಯ ಪ್ರವೇಶಿಸುವ ಮೂಲಕ ವಿವಾದ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ, ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ
ವೀರಬಸಪ್ಪ ಹೂಗಾರ ಸೇರಿದಂತೆ ನಾಡಿನಾದ್ಯಂತ ಆಗಮಿಸಿದ್ದ ವಿವಿಧ ಸಂಘಟನೆಗಳ ಮುಖಂಡರು,ಮಹದಾಯಿ ಹೋರಾಟಗಾರರು ಪಾಲ್ಗೊಂಡಿದ್ದರು. ಹೋರಾಟ ವೇದಿಕೆಯಲ್ಲಿ ಹುತಾತ್ಮ ರೈತ ದಿ| ಈರಪ್ಪ ಕಡ್ಲಿಕೊಪ್ಪರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಛಿಂಜಲಿ ಸಲ್ಲಿಸಲಾಯಿತು. ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ಚಿಕ್ಕಬಳ್ಳಾಪುರ, ಕೊಪ್ಪಳ, ರಾಯಚೂರು, ಮಂಡ್ಯ ಸೇರಿದಂತೆ ಹಲವೆಡೆ ರೈತರು ಪ್ರತಿಭಟನೆ ನಡೆಸಿದರು.

ರೇಷ್ಮೆ ಬೆಳೆಗಾರರ ಪ್ರತಿಭಟನೆ: ಈ ಮಧ್ಯೆ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಭೂಗತಗಳ್ಳಿರೇಷ್ಮೆ ಮಾರುಕಟ್ಟೆಯಲ್ಲಿ ರೊಚ್ಚಿಗೆದ್ದ ರೈತರು ಮದ್ದೂರು-ಮಳವಳ್ಳಿ ಮುಖ್ಯರಸ್ತೆಗೆ ರೇಷ್ಮೆಗೂಡು ಸುರಿದು ಆಕ್ರೋಶ ವ್ಯಕ್ತಪಡಿಸಿದರು. ರೇಷ್ಮೆ ಗೂಡನ್ನು ಮಾರುಕಟ್ಟೆಯಲ್ಲಿ 150 ರೂ.ನಿಂದ 250 ರೂ.ರವರೆಗೆ ಮಾತ್ರ ಕೂಗಿದ್ದು, ಅವರ ಆಕ್ರೋಶಕ್ಕೆ ಕಾರಣವಾಯಿತು.

Comments are closed.