ರಾಷ್ಟ್ರೀಯ

50 ವರ್ಷಗಳ ನಂತರ ಯುದ್ಧ ವಿಮಾನದ ಅವಶೇಷ ಪತ್ತೆ!

Pinterest LinkedIn Tumblr


ಡೆಹ್ರಾಡೂನ್‌: ಬರೋಬ್ಬರಿ 50 ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯಲ್ಲಿ ಪತನಗೊಂಡಿದ್ದ ಯುದ್ಧವಿಮಾನದ ಅವಶೇಷಗಳು ಹಾಗೂ ಯೋಧರೊಬ್ಬರ ಮೃತದೇಹ ಈಗ ಪತ್ತೆಯಾಗಿವೆ. ಭಾರತೀಯ ವಾಯುಪಡೆಗೆ ಸೇರಿದ ವಿಮಾನ ಇದಾಗಿದ್ದು, ಇದೀಗ ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪರ್ವತಾರೋಹಣ ತಂಡವೊಂದು ಮಾರ್ಗ ಮಧ್ಯೆ, ಪತನಗೊಂಡ ವಿಮಾನದ ಅವಶೇಷಗಳನ್ನು ಕಂಡು ಈ ಬಗ್ಗೆ ಅನ್ವೇಷಣೆ ನಡೆಸಿದಾಗ ಇದು ಐಎಎಫ್ಗೆ ಸೇರಿದ್ದಾಗಿತ್ತು ಎಂದು ತಿಳಿದುಬಂದಿದೆ ಎಂದು ತಂಡದ ಮುಖ್ಯಸ್ಥ ರಾಜೀವ್‌ ರಾವತ್‌ ಹೇಳಿಕೊಂಡಿದ್ದಾರೆ.

ಪತ್ತೆಯಾದದ್ದು ಎಂದು?
ಪರ್ವತಾರೋಹಿಗಳ ತಂಡ ಚಂದ್ರಭಾಗ್‌-13ನಿಂದ ಜುಲೈ 1-15ರ ತನಕ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು, ಈ ವೇಳೆ ವಿಮಾನದ ಅವಶೇಷ ಪತ್ತೆಯಾಗಿದೆ. ಭಾರತೀಯ ಪರ್ವತಾರೋಹಣ ಫೌಂಡೇಷನ್‌ ಮತ್ತು ಒಎನ್‌ಜಿಸಿ ಆಯೋಜಿಸಿದ್ದ ಅಭಿಯಾನ ಜು.1ರಂದೇ ಆರಂಭವಾಗಿತ್ತು. ಜು.11ರಂದು ಮಾರ್ಗ ಮಧ್ಯೆ ಪತನಗೊಂಡ ವಿಮಾನ ಪತ್ತೆಯಾಗಿತ್ತು. ಆದರೆ, ಈ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿದ್ದು ತಂಡ ಮರಳಿದ ಬಳಿಕ. ತಂಡ ನೀಡಿರುವ ಮಾಹಿತಿ ಪ್ರಕಾರ ವಿಮಾನಗಳ ಅವಶೇಷಗಳು ಹಾಗೂ ಓರ್ವ ವ್ಯಕ್ತಿಯ ಮೃತದೇಹದ ಅವಶೇಷ ಪತ್ತೆಯಾಗಿವೆ. ಅವಶೇಷಗಳು ಹೆಚ್ಚುಕಡಿಮೆ 2ರಿಂದ 2.25 ಕಿ.ಮೀ.ನಷ್ಟು ದೂರಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಪತನ ಯಾವಾಗ?
50 ವರ್ಷಗಳ ಹಿಂದೆ, ಅಂದರೆ 1968, ಫೆಬ್ರವರಿ 7ರಂದು. ಸೋವಿಯತ್‌ ಯೂನಿಯನ್‌ನಲ್ಲಿ ತಯಾರಾಗಿದ್ದ ಎಎನ್‌-12 ಯುದ್ಧ ವಿಮಾನವನ್ನು ಪೈಲಟ್‌ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಚಂಡಿಗಡದ ಲೇಹ್‌ ಪ್ರದೇಶದತ್ತ ಹಾರಾಟ ನಡೆಸುವಾಗ ಅದು ಪತನಗೊಂಡಿತ್ತು. ರೊಹrಂಗ್‌ ಪಾಸ್‌ ದಾಟುತ್ತಿದ್ದಂತೆ ಸಂಪರ್ಕ ಕಳೆದುಕೊಂಡಿತ್ತು.

ತಂಡ ಹೇಳಿದ್ದೇನು?
ಅವಶೇಷ ಹೊತ್ತು ತರಲು ನಮ್ಮ ಬಳಿ ಏನೂ ಇರಲಿಲ್ಲ. ಪತನಗೊಂಡಿರುವ ಪ್ರದೇಶ ಸಂಪೂರ್ಣ ಹಿಮಾವೃತವಾಗಿರುವ ಕಾರಣ, ಅಲ್ಲಿ ಕಂಡುಬಂದ ಮೃತದೇಹ ಹಾಗೇ ಹೆಪ್ಪುಗಟ್ಟಿಕೊಂಡಿದೆ. ಅದನ್ನು ನೋಡಿ ಒಮ್ಮೆ ಗಾಬರಿಯಾದೆವು. ವಿಮಾನ ಅವಶೇಷಗಳು ನಮ್ಮನ್ನು ಅಚ್ಚರಿಗೊಳಿಸಿತು. ಅವಶೇಷಗಳು ಪತ್ತೆಯಾದ ಸ್ಥಳ, ಸಮುದ್ರ ಮಟ್ಟದಿಂದ ಅಂದಾಜು 18,000 ಅಡಿ ಎತ್ತರ ದಲ್ಲಿದೆ ಎಂದು ರಾಜೀವ್‌ ರಾವತ್‌ ಹೇಳಿ ದ್ದಾರೆ. ಯಾವ ಅವಶೇಷಗಳನ್ನೂ ನಾವು ಸ್ಪರ್ಶಿಸಿಲ್ಲ. ಫೋಟೋ, ವಿಡಿಯೋ ಮಾಡಿಕೊಂಡೆವು. ಅವು ಗಳನ್ನೆಲ್ಲ ಈಗ ಸೇನೆಗೆ ನೀಡಿದ್ದೇವೆ ಎಂದಿದ್ದಾರೆ.

Comments are closed.