ರಾಷ್ಟ್ರೀಯ

8 ವರ್ಷದ ನಂತರ ಸಾಧುವಾಗಿ ಓಡಾಡುತ್ತಿದ್ದ ಕುಖ್ಯಾತ ಕ್ರಿಮಿನಲ್ ಬಂಧನ

Pinterest LinkedIn Tumblr


ಗೋರಖ್‌ಪುರ: ಕಳೆದ ಹಲವು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಕುಖ್ಯಾತ ಕ್ರಿಮಿನಲ್ ಒಬ್ಬ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾನೆ.

ಕಳೆದ 8 ವರ್ಷದ ಹಿಂದೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರೋಪಿ ಬ್ರಿಜೇಷ್ ಪ್ರತಾಪ್ ಸಿಂಗ್ ಸಾಧುವಿನ ವೇಷ ಧರಿಸಿಕೊಂಡು ಓಡಾಡುತ್ತಿದ್ದ. ನೇಪಾಳ, ಬಿಹಾರ ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಗೆ ವಾಸ ಬದಲಿಸುತ್ತಿದ್ದ ಆತನನ್ನು ಹುಡುಕಿ ಕೊಟ್ಟವರಿಗೆ ಪೊಲೀಸ್ ಇಲಾಖೆ 25ಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು.

ಏತನ್ಮಧ್ಯೆ ಆತ ಗೋರಖ್‌ಪುರಕ್ಕೆ ಹಿಂತಿರುಗಿದ್ದಾನೆ ಎಂದು ಪೊಲೀಸರಿಗೆ ರಹಸ್ಯ ಮಾಹಿತಿ ಸಿಕ್ಕಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶ ಕಂಡಿದ್ದು ಪಿಪ್ರೈಚ್ ರೈಲು ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಯಿತು. ಆತನಿಂದ ರಿವಾಲ್ವರ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಕುಶಿನಗರದ ನಿವಾಸಿಯಾಗಿರುವ ಆರೋಪಿಯನ್ನು ಕೊಲೆ ಪ್ರಕರಣವೊಂದರಲ್ಲಿ 2008ರಲ್ಲಿ ಬಂಧಿಸಲಾಗಿತ್ತು. 2010 ರಲ್ಲಿ ದೇವರಿಯಾ ಜೈಲಿನಿಂದ ಗೋರಖ್‌ಪುರ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ, ಅಮಲು ತರಿಸುವ ಪದಾರ್ಥವನ್ನು ಪೊಲೀಸರು ಕುಡಿಯುತ್ತಿದ್ದ ಚಹಾಕ್ಕೆ ಬೆರೆಸಿ ಪರಾರಿಯಾಗಿದ್ದ.

ಸಾಧುವಿನ ವೇಷದಲ್ಲಿ ತಲೆಮರೆಸಿಕೊಂಡಿದ್ದೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ಆತ ಬಾಯ್ಬಿಟ್ಟಿದ್ದಾನೆ.

ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡು ಹೋಗಿ ವಾರಗಳ ಕಾಲ ನೇಪಾಳದ ನಾರಾಯಣ ಘಾಟ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದೆ. ಬಳಿಕ ಬಿಹಾರದ ದರ್ಭಾಂಗ್ ಜಿಲ್ಲೆಗೆ ಹೋದೆ. ಅಲ್ಲಿನ ಆಶ್ರಮವೊಂದರಲ್ಲಿ ಸಾಧುವಾಗಿ ದೀಕ್ಷೆ ಪಡೆದುಕೊಂಡೆ, ಎಂದಾತ ಪೊಲೀಸರಲ್ಲಿ ಹೇಳಿದ್ದಾನೆ.

Comments are closed.