ಕರಾವಳಿ

ವಲಸೆ ಕಾರ್ಮಿಕರಿಂದ ಹೆಚ್ಚಿದ ಮಲೇರಿಯಾ : ಸೊಳ್ಳೆ ನಿಯಂತ್ರಣಕ್ಕೆ ಮನಪಾದಿಂದ ಸೂಕ್ತ ಕ್ರಮ : ಬಿಲ್ಡರ್‍‌ಗಳಿಗೆ ಎಚ್ಚರಿಕೆ

Pinterest LinkedIn Tumblr

ಮಂಗಳೂರು ಜುಲೈ 23 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳು ಹೆಚ್ಚಾಗಿದ್ದು, ರಾಜ್ಯದ ಮತ್ತು ಅಂತರಾಜ್ಯದಿಂದ ಹೆಚ್ಚಿನ ಜನರು ಕೆಲಸಕ್ಕಾಗಿ ವಲಸೆ ಬರುತ್ತಿರುವ ಕಾರಣ ಮಲೇರಿಯಾ ಪ್ರಕರಣಗಳು ವರದಿಯಾಗುತ್ತಿರುತ್ತದೆ.

ಈ ಬಗ್ಗೆ ಮಹಾಪೌರರು, ಮಂಗಳೂರು ಮಹಾನಗರಪಾಲಿಕೆ ಇವರ ಅಧ್ಯಕ್ಷತೆಯಲ್ಲಿ ಮಲೇರಿಯಾ ಕ್ರಿಯಾ ಸಮಿತಿಯ ಪ್ರಗತಿ ಪರಿಶೀಲನೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಣ ಕ್ರಮಗಳ ಅನುಷ್ಠಾನ ಹಾಗೂ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿ ನಡೆಸಲಾಯಿತ್ತು.

ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಲೇರಿಯಾ ನಿಯಂತ್ರಣದ ಬಗ್ಗೆ ತಿಳುವಳಿಕೆಯನ್ನು ನೀಡಲಾಗಿರುತ್ತದೆ. ನಿರ್ಮಾಣ ಹಂತದ ಕಟ್ಟಡಗಳಿಗೆ ಮಹಾನಗರಪಾಲಿಕೆಯ ಮಲೇರಿಯಾ ನಿಯಂತ್ರಣ ಘಟಕದ ವಿವಿದೋದ್ಧೇಶ ಕಾರ್ಯಕರ್ತರು, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳ ಕಛೇರಿಯಿಂದ ಆರೋಗ್ಯ ಸಹಾಯಕರು ಮತ್ತು ಆರೋಗ್ಯ ಮೇಲ್ವಿಚಾರಕರು ಬೇಟಿಯನ್ನು ನೀಡಿ ನೋಟಿಸುಗಳನ್ನು ನೀಡಲಾಗಿರುತ್ತದೆ. ಆದರೂ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆ ಉತ್ಪಾತ್ತಿ ತಾಣಗಳ ಕಾಡಿವಾಣ ಮಾಡಲು ಕಟ್ಟಡದ ಮಾಲಿಕರು ಯಾವುದೇ ಕ್ರಮಕೈಗೊಂಡಿರುವುದಿಲ್ಲ.

ಆದುದರಿಂದ, ಸಭೆಯಲ್ಲಿ ನಿರ್ಣಯಿಸಿರುವಂತೆ ಮಹಾನಗರಪಾಲಿಕೆ/ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳ ಕಛೇರಿಯ ವತಿಯಿಂದ ಅಧಿಕಾರಿ/ಸಿಬ್ಬಂದಿಗಳ ಬೇಟಿಯ ಸಮಯದಲ್ಲಿ ಸೊಳ್ಳೆ ಉತ್ಪಾತ್ತಿ ತಾಣಗಳು ಕಂಡು ಬಂದಲ್ಲಿ ಯಾವುದೇ ನೋಟಿಸು ನೀಡದೆ ನೇರವಾಗಿ ಮೊದಲನೇಯ ಬಾರಿಗೆ ರೂ.15,000/- ದಂಡವನ್ನು ವಿಧಿಸಲಾಗುವುದು ಹಾಗೂ ಎರಡನೇಯ ಭಾರಿಗೆ ಕಟ್ಟಡ ಪರವಾನಗಿಯನ್ನು ರದ್ದು ಪಡಿಸಲು ಕ್ರಮವಹಿಸಲು ಸಭೆಯಲ್ಲಿ ನಿರ್ಣಯಿಸಲಾಗಿರುತ್ತದೆ.

ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯ ರೋಗಗಳನ್ನು ಹರಡುವ ಸೊಳ್ಳೆಗಳು ತಿಳಿ ಯಾ ಶುದ್ಧ ನೀರಿನಲ್ಲಿ ತಮ್ಮ ಸಂತಾನೋತ್ಪತ್ತಿ ಮಾಡುವುದರಿಂದ, ಮನೆ/ಮಳಿಗೆ ಆವರಣ ಮತ್ತು ಒಳಾಂಗಣದಲ್ಲಿರುವ ವಿವಿದ ನೀರು ಸಂಗ್ರಹ ಮೂಲ ಹಾಗೂ ತ್ಯಾಜ್ಯದಲ್ಲಿ ಸಂಗ್ರಹವಾಗಿರುವ ನೀರು ಸೊಳ್ಳೆ ಉತ್ಪತ್ತಿ ತಾಣಗಳಾಗಿದ್ದು, ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿರುತ್ತವೆ. ಮ.ನ.ಪಾ ವತಿಯಿಂದ ನಗರ ವ್ಯಾಪ್ತಿಯಲ್ಲಿ ಮಲೇರಿಯಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಣಾಮ ಮಲೇರಿಯಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮಳೆಗಾಲದಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ರೋಗಗಳನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ರೋಗ ನಿಯಂತ್ರಣಕ್ಕೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಮೂಲಕ, ಮೂಲದಲ್ಲಿಯೇ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ.

ಈ ಕಾರ್ಯಕ್ಕೆ ಸಾರ್ವಜನಿಕರು ಪ್ರತಿ ಭಾನುವಾರ ತಮ್ಮ ಕಟ್ಟಡದ ಆವರಣದಲ್ಲಿರುವ ನೀರಿನ ಮೂಲಗಳನ್ನು ಭರಿದು ಮಾಡುವ ಮೂಲಕ ಹಾಗೂ ಕಟ್ಟಡದ ಆವರಣ ಮತ್ತು ಮೇಲ್ಛಾವಣಿಗಳನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸಬೇಕಾಗಿ ವಿನಂತಿಸಿದೆ. ಈ ಮೂಲಕ ಮಂಗಳೂರು ನಗರದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಮ.ನ.ಪಾದೊಂದಿಗೆ ಸಹಕರಿಸಲು ಕೋರಿದೆ.

ಸಮನ್ವಯ, ಪ್ರಗತಿ ಪರಿಶಿಲನೆ ಸಭೆಗಳು: ಮಲೇರಿಯಾ ನಿಯಂತ್ರಣ ಕಾರ್ಯದಲ್ಲಿ ಭಾಗಿಗಳಾಗಿರುವ ವಿವಿಧ ಪಾಲುದಾರರಾದ ಇಲಾಖೆಗಳು, ಸಿಬ್ಬಂದಿ, ಅಧಿಕಾರಿಗಳು, ಸಮಿತಿ, ಖಾಸಗಿ ಸಂಸ್ಥೆಗಳು, ಬಿಲ್ಡರ್‍ಗಳು ಇತ್ಯಾದಿ ಇವರುಗಳ ಸಮನ್ವಯ ಸಭೆ, ಪರಿಶೀಲನಾ ಸಭೆಗಳನ್ನು ಕಾಲ ಕಾಲಕ್ಕೆ ನಡೆಸುವಂತೆ ಚರ್ಚಿಸಲಾಯಿತು.

ಬಾವಿಗಳಲ್ಲಿ ಗಪ್ಪಿ ಮೀನು ಬಿಡುವ ಕಾರ್ಯಕ್ರಮ: ಮಲೇರಿಯಾ ಹರಡುವ ಅನಾಫಿಲಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ಪೈಕಿ, ಬಾವಿಗಳು ಹೊಂದಾಗಿದ್ದು, ನಗರ ವ್ಯಾಪ್ತಿಯಲ್ಲಿ ಅಂದಾಜು 11728 ಸಂಖ್ಯೆಯ ಬಾವಿಗಳಿದ್ದು, ಈಗಾಗಲೇ 7800 ಬಾವಿಗಳಿಗೆ ಗಪ್ಪಿ ಮೀನುಗಳನ್ನು ಬಿಡಲಾಗಿದೆ ಹಾಗೂ 3928 ಸಂಖ್ಯೆಯ ಬಾವಿಗಳಿಗೆ ಗಪ್ಪಿ ಮೀನುಗಳನ್ನು ಬಿಡಲು ಕ್ರಮವಹಿಸಲಾಗಿದೆ. ಮ.ನ.ಪಾ ವತಿಯಿಂದ ಈವರೆಗೆ 30 ಸಾವಿರ ಗಪ್ಪಿ ಮೀನುಗಳನ್ನು ಸಂಗ್ರಹಿಸಿ ಶೇಕರಿಸಲಾಗಿದ್ದು, ಸಾರ್ವಜನಿಕರು ತಮ್ಮ ಬಾವಿಗಳನ್ನು ಪರಿಶೀಲಿಸಿ ಗಪ್ಪಿ ಮೀನುಗಳನ್ನು ಬಾವಿಗೆ ಬಿಡಲು ಕ್ರಮವಹಿಸುವುದು. ಗಪ್ಪಿ ಮೀನುಗಳನ್ನು ಮಹಾನಗರಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆಯಬಹುದಾಗಿದೆ.

ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ: ಮಹಾನಗರಪಾಲಿಕೆಯ ಎಲ್ಲಾ ವಾರ್ಡುಗಳಲ್ಲಿ ಸಾರ್ವಜನಿಕರಿಗೆ ವಾರ್ಡು ಮಟ್ಟದಲ್ಲಿ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಉಚಿತವಾಗಿ ಸೊಳ್ಳೆ ಪರದೆಯನ್ನು ವಿತರಣೆಯನ್ನು ಮಾಡಲಾಗುತ್ತಿದೆ. ಮಹಾನಗರಪಾಲಿಕೆಗೆ ರಾಷ್ಟ್ರೀಯ ವೆಕ್ಟರ್ ಬೊರ್ನ್ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 64500 ಸಂಖ್ಯೆಯ ಸೊಳ್ಳೆ ಪರದೆಯನ್ನು ನೀಡಿರುತ್ತರೆ. ಈ ಸೊಳ್ಳೆ ಪರದೆಯನ್ನು ಮಹಾನಗರಪಾಲಿಕೆಯ ಎಲ್ಲಾ ವಾರ್ಡುಗಳಲ್ಲಿ ಮನಪಾ ಸದಸ್ಯರ ಮುಖೇನ ವಿತರಿಸಲು ಕ್ರಮವಹಿಸಲಾಗಿದೆಂದು ತಿಳಿಸಿದರು.

ಸದರಿ ಸಭೆಯಲ್ಲಿ ಮನಪಾದ ಆಯುಕ್ತರು, ಸ್ಥಾಯಿ ಸಮಿತಿಯ ಅಧ್ಯಕ್ಷರು, ಸಚೇತಕರು, ಮಲೇರಿಯ ಕ್ರಿಯ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

Comments are closed.