ಕರ್ನಾಟಕ

ಆನೆ ಬಿಡಾರದಲ್ಲಿ ಚಿಗುರಿದ ಅಂತರ್​ಧರ್ಮೀಯ ಪ್ರೀತಿಗೆ ‘ಲವ್​ ಜಿಹಾದ್​’ ಪಟ್ಟಕಟ್ಟಿದ್ದ ಪೊಲೀಸರಿಗೆ ಹೈಕೋರ್ಟ್​ ತಪರಾಕಿ

Pinterest LinkedIn Tumblr


ಬೆಂಗಳೂರು: ಅಂತರ್​ ಧರ್ಮೀಯ ಪ್ರೇಮಿಗಳ ಪ್ರೀತಿಗೆ ಲವ್​ ಜಿಹಾದ್​ ಹೆಸರು ಕಟ್ಟಲು ಹೊರಟ ಪ್ರಕರಣಕ್ಕೆ ಹೈಕೋರ್ಟ್​ ಅಂತ್ಯಹಾಡಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬುಡಕಟ್ಟು ಸಮುದಾಯದ ಹುಡುಗಿ ಸುಮಾ ಮತ್ತು ಮುಸ್ಲಿಂ ಹುಡುಗನ ಮದುವೆಗೆ ಮೊದಲು ಸುಮಾಳ ಮನೆಯವರು ಅಡ್ಡಿಪಡಿಸಿದರೂ ನಂತರ ಒಪ್ಪಿಕೊಂಡರು. ಆದರೆ, ಶಿವಮೊಗ್ಗದ ತುಂಗಾನಗರದ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡರು.

ನಿನ್ನೆ ಈ ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್​ ನ್ಯಾಯಮೂರ್ತಿಗಳು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು, ದಂಪತಿಗೆ ಕಾನೂನುಬದ್ಧ ರಕ್ಷಣೆ ನೀಡುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದೆ.

ಆನೆ ಬಿಡಾರದಲ್ಲಿ ಚಿಗುರಿದ ಪ್ರೀತಿ:
ಬಂಡೀಪುರದಲ್ಲಿ 1 ವರ್ಷ ಕೆಲಸ ಮಾಡಿದ್ದ ಮೈಸೂರು ಮೂಲದ 24 ವರ್ಷದ ರೆಹಮಾನ್​ ಪಾಷಾ ಕಳೆದ 6 ವರ್ಷಗಳಿಂದ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಸಕ್ರೆಬೈಲ್ ಆನೆ ಬಿಡಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಆನೆಗಳ ತರಬೇತಿ ನೀಡುವ ಕೆಲಸ ಮಾಡಿಕೊಂಡಿದ್ದರು.

ಇವರ ಬಿಡಾರದ ಪಕ್ಕದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ 19 ವರ್ಷದ ಸುಮಾ ವಾಸಿಸುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಹುಟ್ಟಿದ ಕಾರಣ ಮದುವೆಯಾಗಲು ತೀರ್ಮಾನಿಸಿದ್ದರು. ಇದಕ್ಕೆ ಸುಮಾ ಅವರ ಮನೆ ಕಡೆಯಿಂದ ವಿರೋಧ ವ್ಯಕ್ತವಾಯಿತು. ಬೇರೆ ಹುಡುಗನನ್ನು ಹುಡುಕತೊಡಗಿದ್ದರಿಂದ ಮನೆ ಬಿಟ್ಟು ಬಂದು ಪಾಷಾ ಜೊತೆಗೆ ವಿವಾಹವಾಗಲು ತೀರ್ಮಾನ ಮಾಡಿದರು. ಕಳೆದ ತಿಂಗಳು ಮೈಸೂರಿನಲ್ಲಿ ಮದುವೆಯನ್ನೂ ಮಾಡಿಕೊಂಡರು. ಬಳಿಕ, ಸುಮಾ ಸ್ವಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಇದಾಗಿ ಸುಮಾರು 20 ದಿನ ನವದಂಪತಿ ಮೈಸೂರಿನ ಶಾಂತಿನಗರದಲ್ಲಿ ನೆಲೆಸಿದ್ದರು. ಜುಲೈ 11ರಂದು ಮೈಸೂರಿನ ಉದಯಗಿರಿ ಪೊಲೀಸರು ಪಾಷಾ ಜತೆಗಿದ್ದ ಸುಮಾ ಅವರನ್ನು ವಶಕ್ಕೆ ಪಡೆದರು. ಮಾರನೇ ದಿನ ಪಾಷಾ ಪೊಲೀಸ್‌ ಠಾಣೆಗೆ ಹೋದಾಗ ಶಿವಮೊಗ್ಗದ ತುಂಗಾನಗರದ ಪೊಲೀಸರಿಗೆ ಸುಮಾ ತಾನೇ ಇಷ್ಟಪಟ್ಟು ಮದುವೆಯಾಗಿದ್ದಾಗಿ ತಿಳಿಸಿದ್ದರಿಂದ ಆಕೆಯ ತಂದೆ ಮದುವೆಯನ್ನು ಒಪ್ಪಿಕೊಂಡರು. ಆದರೆ, ಮೈಸೂರಿನಿಂದ ಸುಮಾಳನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಬಂದ ಪೊಲೀಸರು ಮೂರು ದಿನಗಳ ಕಾಲ ಕಸ್ಟಡಿಯಲ್ಲಿಯೇ ಇಟ್ಟುಕೊಂಡರು. ಬಳಿಕ, ಸ್ಟೇಟ್​ ಹೋಮ್​ನಲ್ಲಿ ಸ್ವಲ್ಪ ದಿನ ಇರಿಸಿ ನಂತರ ಆಕೆಯ ಕುಟುಂಬದವರೊಡನೆ ಕಳುಹಿಸಿಕೊಟ್ಟರು.

ಇದಾದ ನಂತರ ರೆಹಮಾನ್​ ಪಾಷಾ ಪರವಾಗಿ ವಕೀಲರಾದ ಜೆ. ಡಿ. ಕಾಶೀನಾಥ್, ಎನ್​.ಜಿ. ರಮೇಶಪ್ಪ ಸುಮಾ ನಾಪತ್ತೆಯಾಗಿರುವ ಬಗ್ಗೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿದರು. ಪ್ರಕರಣವನ್ನು ನಿನ್ನೆ ವಿಚಾರಣೆಗೆ ಎತ್ತಿಕೊಂಡ ನ್ಯಾ. ರಾಘವೇಂದ್ರ ಚೌಹಾಣ್ ಮತ್ತು ನ್ಯಾ. ಎಚ್. ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಯಾವುದೇ ನಿಯಮಾವಳಿಗಳನ್ನು ಪಾಲಿಸದ ಪೊಲೀಸರ ನಡೆಯನ್ನು ಆಕ್ಷೇಪಿಸಿದೆ.

ಈ ದೇಶದಲ್ಲಿ ಲಕ್ಷಾಂತರ ಭಿಕ್ಷುಕರಿದ್ದಾರೆ. ಅವರು ಬಂದು ರಕ್ಷಣೆ ಕೋರಿದರೆ ನೀವು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸುತ್ತೀರಾ? ಹಾಗಿದ್ದಮೇಲೆ 19 ವರ್ಷದ ಯುವತಿಯ ಮದುವೆಯನ್ನು ಆಕೆಯ ಮನೆಯವರೇ ಒಪ್ಪಿದ ಮೇಲೂ ಸ್ಟೇಟ್‌ ಹೋಮ್‌ಗೆ ಯಾಕೆ ಕಳುಹಿಸಿದಿರಿ? ಎಂದು ನ್ಯಾಯಮೂರ್ತಿಗಳು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಇದೀಗ ರೆಹಮಾನ್​ ಪಾಷಾ ಮತ್ತು ಸುಮಾ ಧರ್ಮವನ್ನು ಮೀರಿ ಹೊಸಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Comments are closed.