ಕರಾವಳಿ

ಅಂಗನವಾಡಿಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವಂತೆ ಸಚಿವೆ ಡಾ.ಜಯಮಾಲಾ ಸೂಚನೆ

Pinterest LinkedIn Tumblr

ಮಂಗಳೂರು ಜುಲೈ 25: ದೇಶದ ಭವಿಷ್ಯ ಇಂದಿನ ಮಕ್ಕಳು; ಹಾಗಾಗಿ ಅಂಗನವಾಡಿಗಳು ವ್ಯವಸ್ಥಿತವಾಗಿರಬೇಕು ಹಾಗೂ ಶುಚಿಯಾಗಿರಬೇಕು. ಇಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕಿದ್ದು, ಅಂಗನವಾಡಿ ಕಾರ್ಯಕರ್ತೆಯರನ್ನು ಕರ್ತವ್ಯದ ಅವಧಿಯಲ್ಲಿ ಬೇರೆ ಕೆಲಸಗಳಿಗೆ ಬಳಸ ಕೂಡದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಡಾ ಜಯಮಾಲಾ ಹೇಳಿದರು.

ಅವರು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅಂಗನವಾಡಿ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಹಾಗೂ ಸಮಯಪಾಲನೆಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದಾಗಿ ಹೇಳಿದ ಅವರು, ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಂಗನವಾಡಿ ವ್ಯವಸ್ಥೆ ಸಬಲೀಕರಣ ತನ್ನ ಧ್ಯೇಯ ಎಂದರು.

ಅಂಗನವಾಡಿ ಸಹಾಯಕಿಯರ ಹುದ್ದೆಗೆ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ಥಳೀಯವಾಗಿ ಕೆಲಸದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ ಹುದ್ದೆ ಭರ್ತಿ ಮಾಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಮಾತೃಪೂರ್ಣ, ಮಾತೃವಂದನಾ ಯೋಜನೆಗಳ ಉದ್ದೇಶವನ್ನು ಅರಿತು ಯೋಜನೆಯ ಯಶಸ್ಸಿಗೆ ಕಾರ್ಯಪ್ರವೃತ್ತರಾಗಿ ಎಂದು ಸಿಡಿಪಿಒಗಳಿಗೆ ಸೂಚಿಸಿದ ಸಚಿವರು, ಮಹಿಳೆಯರಲ್ಲಿ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲು ಕರೆನೀಡಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲು ಅವಕಾಶ ಕಲ್ಪಿಸುವುದರ ಜೊತೆಗೆ ಅವರಿಗೆ ವಸತಿ ಹಾಗೂ ಉದ್ಯೋಗ ಕಲ್ಪಿಸಲು ಕ್ರಮಕೈಗೊಳ್ಳಿ ಎಂದರು. ವಿಕಲಚೇತನರ ಸಶಕ್ತೀಕರಣಕ್ಕೆ ಈಗಾಗಲೇ ಬೆಂಗಳೂರಿನಲ್ಲಿ ಇಪ್ಪತ್ತು ಎಕರೆ ಜಾಗ ಮೀಸಲಿರಿಸಿ ಅವರ ಚಟುವಟಿಕೆಗಳನ್ನು ಗಮನದಲ್ಲಿರಿಸಿ ಅಭಿವೃದ್ಧಿಪಡಿಸಲಾಗಿದೆ. ಇಲಾಖೆಯಲ್ಲಿ ವೈಜ್ಞಾನಿಕವಾಗಿ ಯೋಜನೆಗಳ ಅನುಷ್ಠಾನಕ್ಕೆ ಸಂಶೋಧನೆಗೆ ಅನುದಾನ ಮೀಸಲಿರಿಸಿದೆ ಎಂದ ಅವರು, ಬಾಲಮಂದಿರಗಳಲ್ಲಿ, ಸ್ಟೇಟ್ ಹೋಂಗಳಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಮಾಹಿತಿಯನ್ನು ಪಡೆದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷರಾದ ಕಸ್ತೂರಿ ಪಂಜ, ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಸುಂದರ ಪೂಜಾರಿ ಉಪಸ್ಥಿತರಿದ್ದರು.

Comments are closed.