ರಾಷ್ಟ್ರೀಯ

ಗೋವುಗಳು ಮುಖ್ಯ, ಮನುಷ್ಯರೂ ಮುಖ್ಯ, ಎಲ್ಲರಿಗೂ ರಕ್ಷಣೆ ಇದೆ: ಮುಖ್ಯಮಂತ್ರಿ ಯೋಗಿ

Pinterest LinkedIn Tumblr


ಲಕ್ನೋ: “ನಮಗೆ ಮನುಷ್ಯರೂ ಮುಖ್ಯ, ಗೋವುಗಳೂ ಮುಖ್ಯ. ಪ್ರಕೃತಿಯಲ್ಲಿ ಮನುಷ್ಯರಿಗೆ ಮತ್ತು ಗೋವುಗಳಿಗೆ ತಮ್ಮದೇ ಆದ ಪಾತ್ರಗಳಿವೆ; ಆದುದರಿಂದ ಪ್ರತಿಯೊಬ್ಬರಿಗೂ ರಕ್ಷಣೆ ನೀಡಬೇಕಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ದೇಶದಲ್ಲಿ ಗೋ ರಕ್ಷಣೆ ಹೆಸರಲ್ಲಿ ಶಂಕಿತ ಅಮಾಯಕರನ್ನು ಚಚ್ಚಿ ಸಾಯಿಸುವ ಗುಂಪು ಹಿಂಸೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ಅವರು “ಸರಕಾರ ಪ್ರತಿಯೊಬ್ಬರಿಗೂ ರಕ್ಷಣೆ ನೀಡುತ್ತದೆ; ಸಮಾಜದಲ್ಲಿ ಪ್ರತಿಯೊಂದು ಸಮುದಾಯ ಮತ್ತು ಪ್ರತಿಯೊಂದು ಧರ್ಮದ ಜನರಿಗೆ ಪರಸ್ಪರರನ್ನು ಗೌರವಿಸುವ, ಪರಸ್ಪರರ ಭಾವನೆಗಳನ್ನು ಗೌರವಿಸುವ ಹೊಣೆಗಾರಿಕೆ ಇದೆ; ಈ ಹೊಣೆಗಾರಿಕೆಯನ್ನು ಎಲ್ಲರೂ ಏಕಪ್ರಕಾರವಾಗಿ ನಿಭಾಯಿಸಿದಾಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ತನ್ನಿಂತಾನೆ ನೆಲೆಗೊಳ್ಳುತ್ತದೆ’ ಎಂದು ಹೇಳಿದರು.

ದೇಶದಲ್ಲಿ ನಡೆದಿರುವ ಗುಂಪು ಹಿಂಸೆ ಪ್ರಕರಣಗಳಿಗೆ ಅನಪೇಕ್ಷಿತ ಮಹತ್ವ ನೀಡುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ ಸಿಎಂ ಯೋಗಿ ಅವರು, “ಗುಂಪು ಹಿಂಸೆ ಬಗ್ಗೆ ಅಷ್ಟೆಲ್ಲ ಮಾತನಾಡುವ ನೀವು 1984ರ ಹಿಂಸೆಯ ಬಗ್ಗೆ ಏನಂತೀರಿ?’ ಎಂದು ಪ್ರಶ್ನಿಸಿದರು.

ಕಾನೂನು ಮತ್ತು ಶಿಸ್ತಿನ ವಿಷಯ ಆಯಾ ರಾಜ್ಯ ಸರಕಾರಗಳಿಗೆ ಸೇರಿದ್ದು; ಅಂತಿರುವಾಗ ಇರುವೆಯನ್ನು ಪರ್ವತ ಮಾಡುತ್ತಿರುವ ಕಾಂಗ್ರೆಸ್‌ನ ಉದ್ದೇಶ ಸಫ‌ಲವಾಗದು’ ಎಂದು ಹೇಳಿದರು.

ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ತಬ್ಬಿಕೊಂಡ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕೃತ್ಯ ಅತ್ಯಂತ ಬಾಲಿಶವಾದದ್ದು ಎಂದು ಯೋಗಿ ಟೀಕಿಸಿದರು.

Comments are closed.