ರಾಷ್ಟ್ರೀಯ

ದೌರ್ಜನ್ಯ ಎಸಗುವ ಎನ್‌ಆರ್‌ಐ ಗಂಡನ ವಿರುದ್ಧ ದೂರಿಗೆ ಪೋರ್ಟಲ್ ಅಭಿವೃದ್ಧಿ

Pinterest LinkedIn Tumblr


ಹೊಸದಿಲ್ಲಿ: ಕಿರುಕುಳ ನೀಡುವ ಮತ್ತು ಮದುವೆಯಾದ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿರುವ ಗಂಡನ ವಿರುದ್ಧ ದೂರು ನೀಡಲು ಅನುಕೂಲವಾಗುವಂತೆ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಎನ್‌ಆರ್‌ಐ ಮದುವೆ ಮತ್ತು ಮಹಿಳಾ ಹಾಗೂ ಮಕ್ಕಳ ಕಳ್ಳಸಾಗಣೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಚಿವೆ ಸುಷ್ಮಾ, ತೊಂದರೆಗೊಳಗಾದ ಮಹಿಳೆಯರು ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು. ಬಳಿಕ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರಿಗೆ ನೋಟಿಸ್ ಜಾರಿಮಾಡಲಾಗುತ್ತದೆ ಎಂದರು.

ನೋಟಿಸ್ ಜಾರಿಯಾದ ಬಳಿಕವೂ ಉತ್ತರಿಸದಿದ್ದರೆ, ಅವರನ್ನು ಘೋಷಿತ ಅಪರಾಧಿ ಎನ್ನಲಾಗುತ್ತದೆ. ಬಳಿಕ ಅವರಿಗೆ ಸೇರಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸಂಬಂಧ ಕಾನೂನಿಗೆ ಅಗತ್ಯ ಬದಲಾವಣೆ ಮಾಡಲಾಗುತ್ತದೆ. ಪೋರ್ಟಲ್ ಮೂಲಕ ಸಲ್ಲಿಕೆಯಾದ ದೂರನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಪರಿಗಣಿಸಲು ಸಾದ್ಯವಾಗುವಂತೆ ಅವಕಾಶ ಕಲ್ಪಿಸಲಾಗುತ್ತದೆ. ಈ ಪ್ರಸ್ತಾವಕ್ಕೆ ಕಾನೂನು ಸಚಿವಾಲಯ, ಸಂಸದೀಯ ಸಮಿತಿ, ಗೃಹ ಸಚಿವಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮ್ಮತಿಸಿದೆ ಎಂದು ಸುಷ್ಮಾ ಸ್ವರಾಜ್‌ ಮಾಹಿತಿ ನೀಡಿದರು.

ಮದುವೆಯಾದ ಬಳಿಕ ಎನ್‌ಆರ್‌ಐ ಪತಿ ಹೆಂಡತಿ ಮೇಲೆ ದೌರ್ಜನ್ಯ ಎಸಗುವುದು, ವಿದೇಶಕ್ಕೆ ತೆರಳಿದ ಬಳಿಕ ಹೆಂಡತಿಯನ್ನು ಬಿಟ್ಟುಬಿಡುವುದು ಹೀಗೆ ವಿವಿಧ ಸಂಬಂಧಿತ ಪ್ರಕರಣಗಳನ್ನು ನಿರ್ವಹಿಸಲು ಇದರಿಂದ ಅನುಕೂಲವಾಗಲಿದೆ. ಜ. 2015ರಿಂದ ನ. 2017ರವರೆಗೆ ಸಚಿವಾಲಯಕ್ಕೆ 3,328 ದೂರುಗಳು ಬಂದಿದ್ದು, ಇಂತಹ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸರಕಾರ ಮುಂದಾಗಿದೆ.

Comments are closed.