ರಾಷ್ಟ್ರೀಯ

ದಂಪತಿಯ ಮಧ್ಯೆ ಜಗಳ ತಂದಿಟ್ಟ ಗುಲಾಬಿ

Pinterest LinkedIn Tumblr


ಲಕ್ನೋ: ಪ್ರೇಮದ ಸಂಕೇತವಾದ ಗುಲಾಬಿ ಹೂವು ಉತ್ತರ ಪ್ರದೇಶದಲ್ಲಿ ಗಂಡ – ಹೆಂಡತಿಯ ನಡುವೆ ಕಲಹಕ್ಕೆ ಕಾರಣವಾಗಿದೆ. ಇನ್ನು, ಲಕ್ನೋನ ಸಂಚಾರಿ ಪೊಲೀಸ್ ಈ ಜಗಳಕ್ಕೆ ಕಾರಣರಾಗಿದ್ದಾರೆ ಅನ್ನುವುದು ವಿಚಿತ್ರ.

ಹೆಲ್ಮೆಟ್‌ ಧರಿಸಿ ಬೈಕ್ ಓಡಿಸುವವರಿಗೆ ಪ್ರೋತ್ಸಾಹ ನೀಡಲು ಗುಲಾಬಿ ಹೂವು ನೀಡುವ ಪ್ರಚಾರವನ್ನು ಲಕ್ನೋನ ಟ್ರಾಫಿಕ್ ಪೊಲೀಸ್‌ ಇತ್ತೀಚೆಗೆ ಆರಂಭಿಸಿದ್ದರು. ಇದೇ ರೀತಿ ನಗರದ ಸಿಕಂದರಾಬಾಗ್ ರಸ್ತೆಯಲ್ಲಿ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡುತ್ತಿದ್ದ ಬೈಕ್ ಸವಾರರಿಗೆ ಸಂಚಾರಿ ಪೊಲೀಸ್ ಒಬ್ಬರು ಗುಲಾಬಿ ಹೂವನ್ನು ನೀಡಿದ್ದಾರೆ. ಈ ಹೂವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಕ್ಕೆ ಆತನ ಪತ್ನಿ ರೋಸ್ ಬಗ್ಗೆ ವಿಚಾರಿಸಿದ್ದಾಳೆ.

ಈ ವೇಳೆ, ಪತಿ ಸಂಚಾರಿ ಪೊಲೀಸರು ಕೊಟ್ಟಿದ್ದೆಂದು ಅರ್ಥ ಮಾಡಿಸಿದರೂ ಸಹ ಇದನ್ನು ಒಪ್ಪದ ಪತ್ನಿ ಗಂಡನೊಂದಿಗೆ ಜಗಳ ಮಾಡಿದ್ದಾಳೆ. ನಂತರ, ಇದೇ ವ್ಯಕ್ತಿ ತನಗೆ ಹೂವು ದೊರೆತ ಪ್ರದೇಶಕ್ಕೆ ಮತ್ತೆ ಹೋಗಿ ಗುಲಾಬಿ ಕೊಟ್ಟ ಸಂಚಾರಿ ಪೊಲೀಸರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ, ತನ್ನ ಕತೆಯನ್ನು ಪ್ರೇಮ್‌ಶಂಕರ್ ಶಾಹಿ ಎಂಬ ಸಂಚಾರಿ ಎಸ್‌ಐಗೆ ಹೇಳಿದಾಗ ಅವರು ಕ್ಯಾಂಪೇನ್‌ನ ಫೋಟೋವನ್ನು ವ್ಯಕ್ತಿಗೆ ನೀಡಿದ್ದಾರೆ. ಬಳಿಕ, ಸಂಚಾರಿ ಎಸ್‌ಐ ಈ ಘಟನೆ ಬಗ್ಗೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಇದು ಸ್ಥಳೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

Comments are closed.