ಕರ್ನಾಟಕ

ಚಂದ್ರ ಗ್ರಹಣಕ್ಕೆ ಹೆದರಿ ಹೆರಿಗೆ ಮಾಡಿಸಿಕೊಳ್ಳದ ಗರ್ಭಿಣಿಯರು!

Pinterest LinkedIn Tumblr

ವಿಜಯಪುರ: ಬಸವನಾಡಿನಲ್ಲಿ ಮೂಢ ನಂಬಿಕೆಯೋ ಮತ್ತೊಂದು ಕಾರಣವೋ, ಖಗ್ರಾಸ ಚಂದ್ರಗ್ರಹಣದ ಪರಿಣಾಮ ಕಣ್ಣಿಗೆ ವೇದ್ಯವಾಗಿದೆ. ಇಲ್ಲಿಯ ಹೆರಿಗೆ ಆಸ್ಪತ್ರೆಗಳೆಲ್ಲ ಖಾಲಿಖಾಲಿಯಾಗಿವೆ. ಇಂದು ಹೆರಿಗೆಗೆ ದಿನಾಂಕ ನಿಗದಿಯಾಗಿದ್ದರೂ ಗರ್ಭಿಣಿಯರು ಇತ್ತ ಸುಳಿಯುತ್ತಿಲ್ಲ.

ವಿಜಯಪುರ ನಗರದಲ್ಲಿ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿಖಾಲಿಯಾಗಿದ್ದು, ಬಿಕೋ ಎನ್ನುತ್ತಿವೆ. ಸಿಜೇರಿಯನ್​ಗೆ ಡೇಟ್ ನೀಡಿದರೂ ತುಂಬು ಗರ್ಭಿಣಿ ಮಹಿಳೆಯರು ಈ ಆಸ್ಪತ್ರೆಗಳತ್ತ ಸುಳಿಯುತ್ತಿಲ್ಲ. ಪರಿಣಾಮ ನಿಗದಿಯಾಗಿದ್ದ ಸಿಸೇರಿಯನ್ ಹೆರಿಗೆಗಳನ್ನು ವೈದ್ಯರು ರದ್ದುಪಡಿಸಿದ್ದಾರೆ.

ಗ್ರಹಣ ಕಾಲದಲ್ಲಿ ಗರ್ಭಿಣಿ ಮನೆಯವರಿಂದ ಹೆರಿಗೆ ನಿರಾಕರಣೆ ಹಿನ್ನೆಲೆಯಲ್ಲಿ ವಿಜಯಪುರ ನಗರದ ಸಾಸನೂರ ಹೆರಿಗೆ ಆಸ್ಪತ್ರೆಯೂ ಖಾಲಿ ಖಾಲಿಯಾಗಿದೆ. ಇತ್ತ ಗರ್ಭಿಣಿ ಸ್ತ್ರೀಯರಿಗೆ ಚಂದ್ರ ಗ್ರಹಣ ಕಂಟಕ ತಂದಿದ್ದು, ಗರ್ಭಿಣಿ ಮಹಿಳೆಯರು ಉಪವಾಸ ವ್ರತಾಚರಣೆ ಕೈಗೊಂಡಿದ್ದಾರೆ.

ದೇವರ ನಾಮಾವಳಿ, ಪುಸ್ತಕಗಳನ್ನ ಓದುತ್ತ ಕುಳಿತ ಗರ್ಭಿಣಿಯರು ಗ್ರಹಣದ ಸಮಯ ಸುಸೂತ್ರವಾಗಿ ಕಳೆಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ದೇವರ ನಾಮಸ್ಮರಣೆಯಲ್ಲಿ ತಲ್ಲೀನರಾದ ಗರ್ಭಿಣಿ ಸ್ತ್ರೀಯರು, ಮೈ-ಕೈ ಕೆರೆದುಕೊಳ್ಳುವಂತಿಲ್ಲ, ಉಪಹಾರ ಸೇವಿಸುವಂತಿಲ್ಲ, ಬೆಳಕಿನಲ್ಲಿ‌ ಓಡಾಡುವಂತಿಲ್ಲ ಎಂಬ ನಂಬಿಕೆಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ. ಗರ್ಭಿಣಿ ಸ್ತ್ರೀಯರು ಗ್ರಹಣದ ಕಾಲದಲ್ಲಿ ಎಲ್ಲಿಯೂ ಅಲ್ಲಾಡದೆ, ಕುಳಿತಲ್ಲಿಯೇ ಕುಳಿತುಕೊಳ್ಳುವ ಶಿಕ್ಷೆ ಅನುಭವಿಸುವಂತಾಗಿದೆ. ಮಧ್ಯಾಹ್ನ 12 ಗಂಟೆಯಿಂದಲೆ‌ ಗ್ರಹಣದ ವೇದಾರಂಭ ಆಗಿರುವ ಹಿನ್ನೆಲೆ‌ ವೃತಾಚರಣೆಯನ್ನು ಗರ್ಭಿಣಿ ಮಹಿಳೆಯರು ಮುಂದುವರೆಸಿದ್ದಾರೆ.

ವೈಜ್ಞಾನಿಕವಾಗಿ ಜಗತ್ತು ಇಂದು ಎಷ್ಟೆಲ್ಲ ಮುಂದುವರೆದರೂ ಇನ್ನೂ ಆಚಾರ-ವಿಚಾರ ಬಿಟ್ಟಿಲ್ಲ ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ.

Comments are closed.