ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆವೊಂದರಲ್ಲಿ ದನ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಗೂಡ್ಸ್‌ಶೆಡ್ ಎಂಬಲ್ಲಿ ಮೇಯುತ್ತಿದ್ದ ಎರಡು ದನ ಹಾಗೂ ಕರುವನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಹಾಗೂ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಕಡೆಗಳಲ್ಲಿ 2017ರಲ್ಲಿ ನಡೆದ ದನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೂಡ್ಸ್‌ಶೆಡ್ ನಲ್ಲಿ ನಡೆದ ದನ ಕಳ್ಳತನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಂಧಿಸಲ್ಪಟ್ಟ ಆರೋಪಿಯನ್ನು ಕಸಬಾ-ಬೆಂಗರೆ ನಿವಾಸಿ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರ್(30) ಎಂದು ಗುರುತಿಸಲಾಗಿದೆ. ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದನ ಕಳ್ಳತನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಂಧಿಸಲ್ಪಟ್ಟ ಆರೋಪಿಯನ್ನು ಮಿಜಾರು ಬಡಗ-ಎಡಪದವು ಸಮೀಪದ ತೋಡಾರು ಎಂಬಲ್ಲಿನ ಕೆ. ಅಬ್ದುಲ್ ಬಶೀರ್ ಯಾನೆ ಅರ್ಗ ಬಶೀರ್(42) ಎಂದು ಗುರುತಿಸಲಾಗಿದೆ.
ಜು.7ರಂದು ಗೂಡ್ಸ್‌ಶೆಡ್ ಬಳಿ ಮೇಯುತ್ತಿದ್ದ ದನಗಳ ಪೈಕಿ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಧಿಸಿದ ದನ ಹಗೂ ಕರು ಕಳ್ಳತನವಾಗಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಅಬ್ದುಲ್ ಕಬೀರ್ ವಿರುದ್ಧ ಈ ಹಿಂದೆ ಉಳ್ಳಾಲ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈತನು ಪ್ರಕರಣದ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ಈತನ ವಿರುದ್ಧ ವಾರಂಟ್ ಹೊರಡಿಸಿತ್ತು. ಆರೋಪಿ ದನಕಳ್ಳತನಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೆರೆ :
ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಕಡೆಗಳಲ್ಲಿ 2017ರಲ್ಲಿ ನಡೆದ ದನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕೆ. ಅಬ್ದುಲ್ ಬಶೀರ್ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಈತನನ್ನು ತೋಡಾರುವಿನಲ್ಲಿ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
2017ರಲ್ಲಿ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ರಿಂಗ್‌ರೋಡ್ ಪರಿಸರದಲ್ಲಿನ ಹಟ್ಟಿಯೊಂದರಲ್ಲಿ ಕಟ್ಟಿ ಹಾಕಿದ್ದ ದನವನ್ನು ಕಳ್ಳತನ ಮಾಡಿದ ಪ್ರಕರಣ, ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ಮೇಯಲು ಬಿಟ್ಟಿದ್ದ ದನ ಕಳ್ಳತನ ಮಾಡಿದ ಪ್ರಕರಣ ಹಾಗೂ ಬೊಗ್ರುಗುಡ್ಡೆಯ ಹಟ್ಟಿಯೊಂದರಲ್ಲಿ ಕಟ್ಟಿ ಹಾಕಿದ್ದ ದನಕಳ್ಳತನ ಪ್ರಕರಣಗಳಲ್ಲಿ ಆರೋಪಿ ಕೆ.ಅಬ್ದುಲ್ ಬಶೀರ್ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಆರೋಪಿ ಅಬ್ದುಲ್ ಬಶೀರ್ ವಿರುದ್ಧ ಈ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ.
ದನ ಕಳ್ಳತನ ಪ್ರಕರಣಗಳಲ್ಲಿನ ಆರೋಪಿಗಳ ಪತ್ತೆಗೆ ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಾರಾಮ್, ಪಿಎಸ್ಸೈ ಶ್ಯಾಮ್ ಸುಂದರ್, ಕಬ್ಬಾಳ್‌ರಾಜ್, ಎಎಸ್ಸೈ ಶಶಿಧರ್ ಶೆಟ್ಟಿ, ಹರೀಶ್ ಹಾಗೂ ಸಿಬ್ಬಂದಿಯಾದ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ್, ಶಿನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗಿಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ರಾಜ, ಅಶಿತ್ ಡಿಸೋಜ, ತೇಜಕುಮಾರ್ ಹಾಗೂ ರಿತೇಶ್ ಭಾಗವಹಿಸಿದ್ದರು.
Comments are closed.